

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸಿದ ಸಂದರ್ಭ ಯಾವುದೇ ರೀತಿಯ ಅಕ್ರಮಗಳು ನಡೆದಿಲ್ಲ. ಈ ಕುರಿತು ಯಾವುದೇ ರೀತಿಯ ತನಿಖೆ ನಡೆಸಿದರೆ ಎದುರಿಸಲು ಸಿದ್ಧನಿದ್ದೇನೆ ಎಂದು ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್ ಹೇಳಿದರು.
ಮುಡಾ ಭೂ ಸ್ವಾಧೀನ ಪಡಿಸಿಕೊಂಡ ಸಂದರ್ಭ ಭೂಮಿ ಕಳೆದುಕೊಂಡವರಿಗೆ ಪರಿಹಾರ ರೂಪದಲ್ಲಿ ಹಣ ನೀಡಬೇಕು. ಆದರೆ, ಹಣ ನೀಡಲು ಸಾಧ್ಯವಾಗದೆ ಇರುವ ಸಂದರ್ಭದಲ್ಲಿ ನಿವೇಶನ ನೀಡಲಾಗಿದೆ. ನನ್ನ ಅವಧಿಯಲ್ಲಿ ಈ ರೀತಿ ನಿವೇಶನಗಳನ್ನು ನೀಡಲಾ ಗಿದೆ. ಮುಡಾ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ನಂತರ ನಿವೇಶನ ನೀಡಲಾಗಿದೆ. ಇದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ನಿವೇಶನ ಹಂಚಿಕೆಯ ವಿಚಾರದಲ್ಲಿ ನನ್ನ ಪಾತ್ರವೇನು ಇಲ್ಲ. ಇದು ಮುಡಾ ಸಭೆಯಲ್ಲಿ ಕೈಗೊಂಡ ತೀರ್ಮಾನವಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ನನ್ನ ಅವಧಿಯಲ್ಲಿ ಯಾವುದೇ ಸಿಎ ನಿವೇಶನ ಹಂಚಿಕೆಯಾಗಿಲ್ಲ, ಹಾಗಿರುವ ಸಿಎ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.