

ಚಿತ್ರದುರ್ಗ: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರು ತಮ್ಮ ಅಧಿಕಾರಾವಧಿಯಲ್ಲಿ ದೇಶಕ್ಕೆ ಕೊಟ್ಟಿರುವಂಥ ಕೊಡುಗೆಗಳು ಅನನ್ಯ ಎಂದು ರಾಜೀವ್ ಗಾಂಧಿ ಸದ್ಭಾವನಾ ಜ್ಯೋತಿ ಯಾತ್ರಾ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಸೋಮವಾರ ರಾಜೀವ್ ಗಾಂಧಿ ಅವರ ಜಯಂತಿ ಅಂಗವಾಗಿ ಆ.9 ರಂದು ಪೆರಂಬೂರಿಂದ ಆರಂಭವಾಗಿ 19 ರಂದು ನವದೆಹಲಿಗೆ ತಲುಪಲಿರುವ 34ನೇ ವರ್ಷದ ಸದ್ಭಾವನಾ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಂಡಿರುವ ಪಕ್ಷದ ಪ್ರಮುಖರು, ಕಾರ್ಯಕರ್ತರನ್ನು ಸ್ವಾಗತಿಸಿ ಬೀಳ್ಕೊಡುವ ವೇಳೆ ಮಾತನಾಡಿದರು.
ರಾಜೀವ್ ಗಾಂಧಿಯವರು ಮತದಾನ ಹಕ್ಕಿನ ವಯೋಮಿತಿಯನ್ನು 21 ರಿಂದ 18 ವರ್ಷಕ್ಕೆ ಇಳಿಸುವ ಮೂಲಕ ಯುವಪೀಳಿಗೆ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಿದರು. ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸಿದರು. ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅವರು ಅಕಾಲಿಕ ಮರಣಕ್ಕೆ ತುತ್ತಾಗದೇ ಇದ್ದಿದ್ದರೆ ದೇಶ ಮತ್ತಷ್ಟು ಪ್ರಗತಿ ಕಾಣುತ್ತಿತ್ತು ಎಂದರು.
ಯಾತ್ರಾ ಸಮಿತಿ ಅಧ್ಯಕ್ಷ ದೊರೈ ಮಾತನಾಡಿ, ಕಳೆದ 34 ವರ್ಷಗಳಿಂದ ನಿರಂತರವಾಗಿ ಯಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ತಮಿಳುನಾಡು, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳ ಮೂಲಕ ಹೊಸದಿಲ್ಲಿ ತಲುಪಲಿದೆ. ಕರ್ನಾಟಕದಿಂದ 150 ಕಾರ‌್ಯಕರ್ತರ ತಂಡ ಹೊಸದಿಲ್ಲಿಯ ವೀರಭೂಮಿ ತಲುಪಲಿದೆ ಎಂದು ತಿಳಿಸಿದರು.
19 ರಂದು ಹೊಸದಿಲ್ಲಿ ಸೇರುವ ಯಾತ್ರೆ ಸ್ವಾಗತ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಹರಿಪ್ರಸಾದ್, ವೇಣುಗೋಪಾಲ್, ಪ್ರಿಯಾಕೃಷ್ಣ ಇತರರು ಉಪಸ್ಥಿತರಿರುತ್ತಾರೆ ಎಂದರು.
ಎಂ.ಕೆ.ತಾಜ್‌ಪೀರ್, ಗ್ಯಾರಂಟಿ ಅನುಷ್ಠಾನಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಹಾಲಸ್ವಾಮಿ, ಜಾಕೀರ್ ಹುಸೇನ್, ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಎನ್.ಡಿ.ಕುಮಾರ್, ಪ್ರಸನ್ನಕುಮಾರ್, ಖಾಸೀಂ ಅಲಿ, ಅಂಜಿನಪ್ಪ, ಮಹಡಿ ಶಿವಮೂರ್ತಿ, ಖುದ್ದೂಸ್, ಮುದಾಸೀರ್, ಸುರೇಶ್ ಕಂದಿಕೆರೆ, ಮಧುಗೌಡ, ಸೈಯದ್‌ವಲಿ ಖಾದ್ರಿ ಇತರರು ಇದ್ದರು.