

ಮೈಸೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದುರಾಡಳಿತವನ್ನು ಪ್ರಜ್ಞಾವಂತ ನಾಗರಿಕ ಮತ್ತು ಯುವ ಸಮುದಾಯವು ಸೂಕ್ಷ್ಮವಾಗಿ ಆಲೋಚಿಸಬೇಕಾದ ಅನಿವಾರ್ಯತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ತನ್ವೀರ್ ಸೇಠ್ ಹೇಳಿದರು.
ಇಂದಿರಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪದವೀಧರರ ಜಿಲ್ಲಾಧ್ಯಕ್ಷರ ಪದಗ್ರಹಣ, ಜಿಲ್ಲಾ ಪದವೀಧರರ ಸಮ್ಮೇಳನದಲ್ಲಿ ಮಾತನಾಡಿದರು.
ಸ್ವಾತಂತ್ರೃ ನಂತರದಲ್ಲಿ ಕಾಂಗ್ರೆಸ್ ಸರ್ಕಾರ ವಿವಿಧ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯಿತು. ಪಂಚವಾರ್ಷಿಕ ಯೋಜನೆಗಳ ಮೂಲಕ ಕಾರ್ಖಾನೆಗಳು, ಕೃಷಿ, ಆಹಾರ ಪೂರೈಕೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಿತ್ತು. ಆದರೆ ಬಿಜೆಪಿ ಕೇಂದ್ರ ಸರ್ಕಾರದ ಆಡಳಿತ ಇದಕ್ಕೆ ವಿರುದ್ಧವಾಗಿದೆ ಎಂದರು.
ಭಾರತ ತಂತ್ರಜ್ಞಾನದಲ್ಲಿ ಇಷ್ಟೊಂದು ಸಾಧನೆ ಮಾಡಲು ಮೂಲ ಕಾರಣ ರಾಜೀವ್ ಗಾಂಧಿ. ರಾಷ್ಟ್ರದ ಯುವ ನಾಯಕರಾಗಿ ಜನರ ಧ್ವನಿಯಾಗಿದ್ದರು ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 26 ವಿವಿಧ ಘಟಕ ಪ್ರಾರಂಭಿಸಿದ್ದು, ಪಕ್ಷ ಸಂಘಟಿಸಲು ಎಲ್ಲ ರೀತಿಯ ತಯಾರಿ ಮಾಡಲಾಗಿದೆ. ಪಕ್ಷದಿಂದ ಅಧಿಕಾರವನ್ನು ಪಡೆದುಕೊಂಡವರು ಜವಾಬ್ದಾರಿಯಿಂದ ತಮ್ಮ ಕೆಲಸ ನಿರ್ವಹಣೆ ಮಾಡಬೇಕು. ಆಗ ಮುಂದಿನ ದಿನಗಳಲ್ಲಿ ಪಕ್ಷ ಹೆಚ್ಚಿನ ರೀತಿಯಲ್ಲಿ ಸಂಘಟನೆ ಆಗುತ್ತಿದೆ. ರಾಜಕಾರಣ ಮಾಡುವವರು ಪಕ್ಷದ ಆಲೋಚನೆ, ಸಿದ್ಧಾಂತ ಒಪ್ಪಿಕೊಂಡಿರಬೇಕು ಎಂದರು.
ಕೆಪಿಸಿಸಿ ಮುಖ್ಯ ವಕ್ತಾರ ಅನಿಲ್ ಕುಮಾರ್ ತಡಕಲ್ ಮಾತನಾಡಿ, ಪ್ರತಿಯೊಬ್ಬರ ನಡೆ ಮತ್ತು ಆಲೋಚನೆ, ರಾಜಕೀಯವಾಗಿರುತ್ತದೆ. ರಾಜಕಾರಣದ ಹೊರತಾದ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಮತ ಚಲಾವಣೆ ಮಾಡುವುದು ಮತ ಚಲಾವಣೆ ಮಾಡದೆ ಇರುವುದು ಎಲ್ಲವೂ ಕೂಡ ಒಂದು ಐಡಿಯಾಲಜಿಗೆ ಸಂಬಂಧಿಸಿದ ವಿಚಾರ. ಪ್ರತಿಯೊಬ್ಬ ವ್ಯಕ್ತಿಯು ತನ್ನ ನಿಲುವಿನ ಮೇಲೆ ಅರಿವು ಮತ್ತು ಹಿಡಿತವನ್ನು ಹೊಂದಿದ್ದಾಗ ಮಾತ್ರ ನಮಗೆ ರಾಜಕೀಯ ಪ್ರಜ್ಞೆ ಪ್ರಬುದ್ಧವಾಗಿ ಬೆಳೆಯುತ್ತದೆ. ಬಿಜೆಪಿಯ ಸಾಲು ಸಾಲು ಹಗರಣಗಳನ್ನು ನೋಡಿದರೆ ಅವರ ಐಡಿಯಾಲಜಿ ಏನು ಎಂಬುದು ಸ್ಪಷ್ಟವಾಗುತ್ತದೆ. ಆ ಪಕ್ಷದಲ್ಲಿ ಇರುವ ಕೆಟ್ಟ ಐಡಿಯಾಲಜಿ ಮೇಲೆ ಪದವಿ ನೀಡುವ ಸಂಸ್ಕೃತಿ ಇದೆ ಎಂದರು.
ಪ್ರತಿಯೊಬ್ಬ ಯುವಕ ಕೂಡ ಪ್ರಗತಿಪರ ಆಲೋಚನಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಉತ್ತಮವಾದ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಪದವೀಧರ ಘಟಕದ ನೂತನ ಅಧ್ಯಕ್ಷ ಸಿದ್ಧಾರ್ಥ್ ನಾಯಕ ಅವರಿಗೆ ರಾಜ್ಯ ಪದವೀಧರ ಘಟಕದ ಅಧ್ಯಕ್ಷ ನಟರಾಜ್‌ಗೌಡ ಅವರು ಕಾಂಗ್ರೆಸ್ ಧ್ವಜ ನೀಡುವುದರ ಮೂಲಕ ಹೊಸ ಜವಾಬ್ದಾರಿ ವಹಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟುಹಬ್ಬದ ಅಂಗವಾಗಿ ಸಂವಿಧಾನದ ಪ್ರಸ್ತಾವನೆ ಓದಿ ಪ್ರತಿಯೊಬ್ಬರಿಗೂ ಸಿಹಿ ವಿತರಿಸಲಾಯಿತು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮುಖಂಡರಾದ ಹುಣಸೂರು ಬಸವಣ್ಣ, ಶಿವಪ್ರಸಾದ್, ಶ್ಯಾಮಾ, ಯೋಗೀಶ್, ಲಕ್ಷ್ಮಣ್, ಉತ್ತನಹಳ್ಳಿ ಶಿವಣ್ಣ, ರಾಹುಲ್ ಕುಂಬರಹಳ್ಳಿ, ಜಮೀರ್, ಪುಟ್ಟಸ್ವಾಮಿ, ಸಿದ್ದರಾಜು ಇನ್ನಿತರರಿದ್ದರು.