ರಾಜೀವಗಾಂಧಿ ಆರೋಗ್ಯ ವಿವಿ 25ನೇ ಘಟಿಕೋತ್ಸವ; ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್​ ಪ್ರದಾನ

RGUHS
Published on

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (RGUHS) 25ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವು ಜೂ.10 ಶನಿವಾರದಂದು ಬೆಳಗ್ಗೆ 11 ಗಂಟೆಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ(IISC) ಜೆ.ಎನ್.ಟಾಟಾ ಸಭಾಂಗಣದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ 97 ವಿದ್ಯಾರ್ಥಿಗಳಿಗೆ 108 ಚಿನ್ನದ ಪದಕ, 51 ಪಿಎಚ್.ಡಿ, 150 ಸೂಪರ್ ಸ್ಪೆಷಾಲಿಟಿ, 7,351 ಸ್ನಾತಕೋತ್ತರ ಪದವಿ, 22 ಸ್ನಾತಕೋತ್ತರ ಡಿಪ್ಲೊಮಾ ಪದವಿ, 277 ಫೆಲೋಶಿಪ್ ಕೋರ್ಸ್, 9 ಸರ್ಟಿಫಿಕೇಟ್ ಕೋರ್ಸ್, 41,700 ಪದವಿ ಸೇರಿ 49,560 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ.

ಎಲ್ಲ ವಿಭಾಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಫಲಿತಾಂಶ ಶೇ.84.26 ಇದೆ. ಕಳೆದ ವರ್ಷ (ಶೇ.82.25)ಕ್ಕಿಂತ ಶೇ.2.01 ಲಿತಾಂಶ ಹೆಚ್ಚಳವಾಗಿದೆ.

ಮೂವರಿಗೆ ಗೌರವ ಡಾಕ್ಟರೇಟ್

ಈ ಕುರಿತು ಮಾತನಾಡಿದ IISC ಕುಲಪತಿ ಡಾ.ಎಂ.ಕೆ.ರಮೇಶ್ ಘಟಿಕೋತ್ಸವದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್, ನಿಮ್ಹಾನ್ಸ್ ಮಾಜಿ ನಿರ್ದೇಶಕ ಡಾ.ಪಿ.ಸತೀಶ್ ಚಂದ್ರ ಹಾಗೂ ಡಾ.ಎಂ.ಕೆ.ಸುದರ್ಶನ್ ಇವರಿಗೆ ಡಾಕ್ಟರ್ ಆಫ್​ ಸೈನ್ಸ್ ಡಾಕ್ಟರೇಟ್​ ಪದವಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಖ್ಯ ಅತಿಥಿಯಾಗಿ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಪ್ರಸನ್ನ ಬಿ. ವರಾಲೆ ಅವರು ಭಾಗವಹಿಸಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಪಾಲ್ಗೊಳ್ಳಲಿದ್ದಾರೆ ಎಂದು IISC ಕುಲಪತಿ ಡಾ.ಎಂ.ಕೆ.ರಮೇಶ್ ಮಾಹಿತಿ ನೀಡಿದ್ದಾರೆ.

Awardees

2 ಬಾರಿ ಮೌಲ್ಯಮಾಪನಕ್ಕೆ ಕ್ರಮ

ಮೌಲ್ಯಮಾಪನ ಕುಲಸಚಿವ ಡಾ.ಎನ್.ರಾಮಕೃಷ್ಣ ರೆಡ್ಡಿ ಮಾತನಾಡಿ, ಮೌಲ್ಯಮಾಪನ ಪದ್ಧತಿಯಲ್ಲಿ ಮಾಡಿರುವ ಬದಲಾವಣೆಯೇ ಫಲಿತಾಂಶಕ್ಕೆ ಕಾರಣವಾಗಿದೆ. ಈ ಹಿಂದೆ ಎರಡು ಬಾರಿ ಮೌಲ್ಯಮಾಪನ ಮಾಡಿ ಅದರಲ್ಲಿ ಎರಡು ಕಡೆ ಬಂದ ಫಲಿತಾಂಶದಲ್ಲಿ ಸರಾಸರಿಯನ್ನು ಪರಿಶೀಲಿಸಿ ಅಂತಿಮವಾಗಿ ಬಂದ ಅಂಕಗಳನ್ನು ಪರಿಗಣಿಸಲಾಗುತ್ತಿತ್ತು.

2022ರ ಸೆಪ್ಟಂಬರ್ ನಂತರ ಮೌಲ್ಯಮಾಪನ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಎರಡು ಬಾರಿಯ ಮೌಲ್ಯಮಾಪನದಲ್ಲಿ ಬರುವ ಹೆಚ್ಚಿನ ಅಂಕವನ್ನು ಪರಿಗಣಿಸಲಾಗುತ್ತದೆ ಎಂದು ವಿವಿ ಮೌಲ್ಯಮಾಪನ ಕುಲಸಚಿವ ಡಾ.ಎನ್.ರಾಮಕೃಷ್ಣ ರೆಡ್ಡಿ ತಿಳಿಸಿದ್ದಾರೆ.

ಚಿನ್ನದ ಪದಕ

ರಾಜ್ಯದಲ್ಲಿ ಒಟ್ಟು 97 ವಿದ್ಯಾರ್ಥಿಗಳು 108 ಚಿನ್ನದ ಪದಕಗಳನ್ನು ಪಡೆಯಲು ಅರ್ಹತೆ ಹೊಂದಿದ್ದಾರೆ. ಈ ಪೈಕಿ ಫಾರ್ಮ-ಡಿ ಕೋರ್ಸ್‌ನಲ್ಲಿ ಪಿಇಎಸ್ ಕಾಲೇಜು ವಿದ್ಯಾರ್ಥಿನಿ ಡಾ.ಕೆ.ದೀಪ್ತಿ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ ವಿದ್ಯಾರ್ಥಿನಿ ರಜನಿ ಪಂತ ಅವರು ತಲಾ 3 ಚಿನ್ನದ ಪದಕ ಪಡೆಯಲು ಅರ್ಹರಾಗಿದ್ದಾರೆ.

ಶಿವಮೊಗ್ಗದ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿ ಡಾ.ರಿಷಿಕಾ ಎಸ್ ಪಟೇಲ್, ದಿ ಆಕ್ಸ್‌ರ್ಡ್ ಡೆಂಟಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿ ಡಾ. ಅಮೋಘ ಸಾರಥಿ, ಮೂಡಬಿದ್ರೆ ಆಳ್ವಾಸ್ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಬಿಎಎಂಎಸ್ ವಿದ್ಯಾರ್ಥಿನಿ ಡಾ.ಟಿ.ಸಾಯಿ ಚಿನ್ಮಯಿ ಇವರು ತಲಾ 2 ಚಿನ್ನದ ಪದಕ ಮತ್ತು 1 ನಗದು ಬಹುಮಾನವನ್ನು ಪಡೆಯಲು ಅರ್ಹರಾಗಿದ್ದಾರೆ. ಚಿನ್ನದ ಪದಕವು 22 ಕ್ಯಾರೆಂಟ್‌ನ 5 ಗ್ರಾಂ ತೂಕ ಹೊಂದಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net