19ರಂದು ನವದೆಹಲಿ ತಲುಪಲಿದೆ ರಾಜೀವ್‌ಗಾಂಧಿ ಜ್ಯೋತಿ ಯಾತ್ರೆ

Rajiv Gandhi Jyoti Yatra
ರಾಜೀವ್‌ಗಾಂಧಿ ಜ್ಯೋತಿಯನ್ನು ಮಹಿಳಾ ಕಾಂಗ್ರೆಸಿಗರಾದ ಬಲ್ಕೀಶ್ ಬಾನು, ಸ್ಟೆಲ್ಲಾ ಮಾರ್ಟಿನ್, ಜ್ಯೋತಿ, ಸಂಧ್ಯಾರಾಣಿ ಮತ್ತಿತರರು ಸ್ವಾಗತಿಸಿದರು. ಎನ್.ರಮೇಶ, ಸಿ.ಎಸ್.ಚಂದ್ರಭೂಪಾಲ್, ಕಲೀಂ ಪಾಶಾ ಇದ್ದರು.
Published on

ಶಿವಮೊಗ್ಗ: ದೇಶದಲ್ಲಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯುವ ನಿಟ್ಟಿನಲ್ಲಿ ತಮಿಳುನಾಡಿನಿಂದ ಆರಂಭಗೊಂಡ ರಾಜೀವ್‌ಗಾಂಧಿ ಜ್ಯೋತಿ ಯಾತ್ರೆಯು ಆ.19ರಂದು ನವದೆಹಲಿ ತಲುಪಲಿದೆ ಎಂದು ಯಾತ್ರೆ ಸಮಿತಿ ಅಧ್ಯಕ್ಷ ಆರ್.ದೊರೈ ತಿಳಿಸಿದರು.

ಯಾತ್ರೆಯು ಆ. 9ರಂದು ತಮಿಳುನಾಡಿನ ಶ್ರೀಪೆರಂಬದೂರು (ರಾಜೀವ್ ಹತ್ಯೆಯಾದ ಸ್ಥಳ)ದಿಂದ ಆರಂಭಗೊಂಡಿದ್ದು, ಹಲವು ರಾಜ್ಯಗಳ ಮೂಲಕ ಕೊಂಡೊಯ್ದು ಆ. 20ರಂದು ನವದೆಹಲಿಯ ವೀರಭೂಮಿಯಲ್ಲಿ ಯಾತ್ರೆ ಅಂತಿಮಗೊಳ್ಳಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆ.20ರಂದು ರಾಜೀವ್‌ಗಾಂಧಿ ಅವರ 79ನೇ ಜನ್ಮದಿನಾಚರಣೆ ಇದ್ದು ಯಾತ್ರೆ ಮೂಲಕ ಅವರಿಗೆ ನಮನ ಸಲ್ಲಿಸಲಾಗುವುದು. ಅಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪವನ್‌ಕುಮಾರ್ ಬನ್ಸಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್ ಮತ್ತಿತರರು ಜ್ಯೋತಿಯನ್ನು ಸ್ವೀಕರಿಸುವರು ಎಂದು ಹೇಳಿದರು.
ಆ. 9ರಂದು ಯಾತ್ರೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಅಳಗಿರಿ, ಕರ್ನಾಟಕದ ಸ್ಪೀಕರ್ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡೂರಾವ್ ಮತ್ತಿತರರು ಚಾಲನೆ ನೀಡಿದ್ದರು. ಶುಕ್ರವಾರ ಶಿವಮೊಗ್ಗ ಪ್ರವೇಶಿಸಿರುವ ಜ್ಯೋತಿಯು ಕರ್ನಾಟಕದಿಂದ ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮೂಲಕ ನವದೆಹಲಿ ಪ್ರವೇಶಿಸಲಿದೆ. ಕರ್ನಾಟಕಕ್ಕೆ ಯಾತ್ರೆ ಕಾಲಿಟ್ಟಾಗ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಹಿತ ಹಲವು ಸಚಿವರು ಸ್ವಾಗತಿಸಿದ್ದರು ಎಂದರು.
ಯಾತ್ರೆ ಸಮಿತಿ ಸಂಚಾಲಕ ಎ.ಗೋಮತೀಶನ್ ಮಾತನಾಡಿ, ದೇಶದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ಕರೆ ಕೊಡುವುದು, ಶಾಂತಿಗಾಗಿ ರಾಜೀವ್ ಗಾಂಧಿ ದುಡಿದದ್ದನ್ನು ಸ್ಮರಿಸುವುದು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ರಾಜೀವ್ ಕೊಡುಗೆಯನ್ನು ನೆನಪಿಸುವುದು, ಸಹೋದರತ್ವವನ್ನು ಸಾರುವುದು ಈ ಯಾತ್ರೆಯ ಉದ್ದೇಶ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಜ್ಯೋತಿಯನ್ನು ಮಹಿಳಾ ಕಾಂಗ್ರೆಸಿಗರಾದ ಬಲ್ಕೀಶ್ ಬಾನು, ಸ್ಟೆಲ್ಲಾ ಮಾರ್ಟಿನ್, ಜ್ಯೋತಿ, ಸಂಧ್ಯಾರಾಣಿ ಮೊದಲಾದವರು ಆರತಿ ಎತ್ತಿ ಸ್ವಾಗತಿಸಿದರು. ನಂತರ ನಡೆದ ಸಭೆಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ್, ಕಲೀಂ ಪಾಶಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net