

ಮಡಿಕೇರಿ:
ಇಂದಿನ ಅಗತ್ಯತೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ತಯಾರಿ ಮಾಡುವ ಶೈಕ್ಷಣಿಕ ವ್ಯವಸ್ಥೆ ಪ್ರಸ್ತುತ ದಿನಗಳಲ್ಲಿ ಅಗತ್ಯವಿದೆ ಎಂದು ಪ್ರೊಬೆಷನರಿ ಐಪಿಎಸ್ ಅಧಿಕಾರಿ ಡಾ. ಬೆನಕ ಪ್ರಸಾದ್ ಹೇಳಿದರು. ಇಲ್ಲಿ ಮಹದೇವಪೇಟೆಯಲ್ಲಿ ಇರುವ ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ 34ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಈಚೆಗೆ ಮಾತನಾಡಿದರು.
ಆಧುನಿಕ ದಿನಗಳಲ್ಲಿ ಹೆಚ್ಚು ಸ್ಪರ್ಧಾತ್ಮಕತೆಯಿಂದ ಕೂಡಿರುವ ಜಗತ್ತಿನಲ್ಲಿ ಪರಿಪೂರ್ಣ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ಎಂದರು.
ಮುಖ್ಯ ಅಥಿಯಾಗಿ ಪಾಲ್ಗೊಂಡಿದ್ದ ಹೆಚ್ಚುವರಿ ಪೊಲೀಸ್ ಅಧಿಕಾರಿ ಕೆ.ಎಸ್. ಸುಂದರ್ ರಾಜ್ ಮಾತನಾಡಿ, ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಪಿಡುಗು, ಅದರ ಸಮಸ್ಯೆಯ ವ್ಯಾಪಕತೆ, ಈ ಸಮಸ್ಯೆ ಕುರಿತಂತೆ ಪೋಷಕರ ಮತ್ತು ಶಿಕ್ಷಕರ ಪಾತ್ರ ಇತ್ಯಾದಿ ವಿಷಯಗಳ ಕುರಿತು ತಿಳಿಸಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷ ಗೋವಿಂದರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ದಾಕ್ಷಾಯಿಣಿ ವಾಸುದೇವ್, ಕಾರ್ಯದರ್ಶಿ ಸಚಿನ್ ವಾಸುದೇವ್, ಅಡಳಿತ ಮಂಡಳಿ ನಿರ್ದೇಶಕರಾದ ದೇವರಾಜ್, ಸತೀಶ್, ಸದಸ್ಯರಾದ ಚುಮ್ಮಿ ದೇವಯ್ಯ, ಅನೀಲ್ ಕೃಷ್ಣಾನಿ, ಕಿರಣ್ ಕುಮಾರ್, ಪ್ರಾಂಶುಪಾಲ ಮಂದಣ್ಣ, ಶಿಕ್ಷಕರಾದ ಲವಿನ್ ಲೋಪೆಜ್ ಅನಿಷತ್, ಅವರ್ತಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ ಅಪ್ಪಾಜಪ್ಪ, ಸುಂದರೇಶ್ ಮತ್ತಿತರರು ಇದ್ದರು.
ಶೈಕ್ಷಣಿಕ ಸಾಲಿನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಕ್ರೀಡೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.