

ಬೆಂಗಳೂರು: ಶಿರಾ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಶನಿವಾರ ಹಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಚುನಾವಣಾ ಅಖಾಡಕ್ಕೆ ಸಜ್ಜಾಗಿದೆ. ಮೂರು ಬಾರಿ ಸಂಸದರಾಗಿದ್ದ ಮೂಡಲಗಿರಿಯಪ್ಪ ಅವರ ಪುತ್ರ, ಡಾ.ರಾಜೇಶ್ಗೌಡ ಅವರ ಜತೆೆ ನಾದೂರು ಹಾಗೂ ಮದಲೂರು ಜಿಪಂ ಸದಸ್ಯೆಯರ ಪತಿಯರು ಬಿಜೆಪಿ ಸೇರ್ಪಡೆಯಾಗಿದ್ದು, ಅವರನ್ನು ಶನಿವಾರ ಬಿಜೆಪಿ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಪಕ್ಷದ ಬಾವುಟ ನೀಡುವ ಮೂಲಕ ಅಧಿಕೃತವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ಸಂದರ್ಭದಲ್ಲಿ ತಾಪಂ ಸದಸ್ಯರು, ನಗರಸಭಾ ಮಾಜಿ ಸದಸ್ಯರು ಸೇರಿ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ಸ್ಥಳದಲ್ಲಿಯೇ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು. ಸ್ಥಳದಲ್ಲಿಯೇ ರಸೀದಿ ಹಾಕಿ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು.
ಇದೇ ಸಂದರ್ಭದಲ್ಲಿ ತಾಪಂ ಸದಸ್ಯರು, ಮಾಜಿ ನಗರಸಭಾ ಸದಸ್ಯರು ಸೇರಿದಂತೆ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ಸ್ಥಳದಲ್ಲಿಯೇ ರಸೀದಿ ಹಾಕಿ ಪ್ರಾಥಮಿಕ ಸದಸ್ಯತ್ವ ನೀಡಲಾಯಿತು.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಡಾ.ರಾಜೇಶ್ ಗೌಡ, ನಮ್ಮ ದೇಶದಲ್ಲಿ ಕಟ್ಟಕಡೆಯ ಪ್ರಜೆಗೂ ಒಳ್ಳೆಯ ಜೀವನ ಸಿಗಲು ಒಳ್ಳೆಯ ರಾಜಕೀಯ ವೇದಿಕೆ ಅಗತ್ಯ. ನಾನೊಬ್ಬ ವೈದ್ಯ, ಇದುವರೆಗೆ ಯಾವುದೇ ಪಕ್ಷ ಸೇರಿರಲಿಲ್ಲ. ನಾನು ಮೊದಲಿಂದಲೂ ಬಿಜೆಪಿ ಬೆಂಬಲಿಸುತ್ತಿದ್ದೆ. ಇವತ್ತು ಬಿಜೆಪಿ ಸೇರುತ್ತಿರುವುದು ಸಂತಸ ತಂದಿದೆ ಎಂದರು.
ನನ್ನ ತಂದೆ (ಮೂಡಲಗಿರಿಯಪ್ಪ) 3 ಬಾರಿ ಸಂಸದ, ಒಮ್ಮೆ ಶಿರಾ ಕ್ಷೇತ್ರದ ಶಾಸಕರಾಗಿದ್ದರು. ನನಗೂ ರಾಜಕೀಯಕ್ಕೆ ಬರುವಂತೆ ಕ್ಷೇತ್ರದ ಜನತೆಯ ಒತ್ತಾಯ ಇತ್ತು. ನಾನು ಪಕ್ಷ ಸೇರಿದರೆ ಅದು ಬಿಜೆಪಿಯೇ ಆಗಿರಬೇಕು ಅಂದುಕೊಂಡಿದ್ದೆ. ಶಿರಾ ಕ್ಷೇತ್ರದಲ್ಲಿ ನಾವೆಲ್ಲ ಬಿಜೆಪಿ ವಿಜಯದ ಪತಾಕೆ ಹಾರಿಸುತ್ತೇವೆ ಎಂದು ಹೇಳಿದರು.
ಶಿರಾದಲ್ಲಿ ಈ ಬಾರಿ ಬಿಜೆಪಿ ಗೆಲುವು ಶತಸಿದ್ಧ. ಇಂದು ಬಹಳಷ್ಟು ಮುಖಂಡರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಇನ್ನಷ್ಟು ಬಲ ಬಂದಿದ್ದು, ಇವರೆಲ್ಲರ ಶ್ರಮದಿಂದ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. | ನಳಿನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷ
ಟಿಕೆಟ್ ಪಕ್ಷಕ್ಕೆ ಬಿಟ್ಟ ವಿಷಯ ಇವತ್ತು ಕಾರ್ಯಕರ್ತನಾಗಿ ಸೇರ್ಪಡೆ ಆಗಿದ್ದೇನೆ. ಟಿಕೆಟ್ ವಿಚಾರದಲ್ಲಿ ಪಕ್ಷ ತೀರ್ಮಾನ ಮಾಡಲಿದೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ನಾನು ನಾಯಕತ್ವಕ್ಕೆ ಮೆಚ್ಚಿ ಸೇರ್ಪಡೆ ಆಗಿದ್ದೇನೆ ಎಂದು ಡಾ.ರಾಜೇಶ್ ಗೌಡ ಹೇಳಿದರು.
ರಾಜೇಶ್ ಗೌಡ ನಮ್ಮ ಪಕ್ಷಕ್ಕೆ ಬಂದಿದ್ದು ದೊಡ್ಡ ಬಲ ತಂದಿದೆ. ಇವರು ಶಿರಾ ಟಿಕೆಟ್ ಬಯಸಿ ಪಕ್ಷ ಸೇರಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬಂದಿದ್ದಾರೆ. | ಸುರೇಶ್ ಗೌಡ ಬಿಜೆಪಿ ಜಿಲ್ಲಾಧ್ಯಕ್ಷ, ತುಮಕೂರು