

ಮೈಸೂರು: ನೂತನ ಜಿಲ್ಲಾಧಿಕಾರಿಯಾಗಿ ಡಾ.ಕೆ.ವಿ. ರಾಜೇಂದ್ರ ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ನೂತನ ಜಿಲ್ಲಾಧಿಕಾರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
ಅಧಿಕಾರ ಸ್ವೀಕರಿಸುವುದಕ್ಕಿಂತ ಮುಂಚಿತವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡೇಶ್ವರಿಯ ಆಶೀರ್ವಾದ ಪಡೆದರು. ರಾಜೇಂದ್ರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ನೂತನ ಜಿಲ್ಲಾಧಿಕಾರಿಯಾಗಿ ಕಡತಗಳಿಗೆ ಸಹಿ ಹಾಕಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ.ಕೆ.ವಿ ರಾಜೇಂದ್ರ, ಸರ್ಕಾರ ನನ್ನ ಸಾಮರ್ಥ್ಯವನ್ನು ನೋಡಿ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಜಿಲ್ಲಾಧಿಕಾರಿ ಕಚೇರಿ ಎಂದರೆ ಸಾರ್ವಜ ನಿಕರಿಗೆ ಸದಾ ತೆರೆದಿರಬೇಕು, ಅಂತಹ ಆಡಳಿತ ನೀಡಲು ಇಷ್ಟಪಡುತ್ತೇನೆ. ಸರ್ಕಾರದ ಯೋಜನೆಗಳಿಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಕಚೇರಿಗೆ ಅಲೆಯದೆ ತಾಲೂಕು ಮಟ್ಟದಲ್ಲೇ ಸಮಸ್ಯೆ ಬಗೆಹರಿಸುವಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, ಮೈಸೂರು ಜಿಲ್ಲಾಧಿಕಾರಿಯಾಗಿ ಉತ್ತಮವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಮೈಸೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ. ಒಂದೂವರೆ ವರ್ಷ ಜಿಲ್ಲೆಯ ಜನತೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಸಂಸದರು, ಶಾಸಕರು, ಅಧಿಕಾರಿಗಳು ಸಹಕಾರ ಕೊಟ್ಟಿದ್ದಾರೆ, ಎಲ್ಲ ಸಮಯದಲ್ಲಿ ಜತೆಗಿದ್ದು ಬೆಂಬಲ ನೀಡಿದರು. ನೂತನ ಜಿಲ್ಲಾಧಿಕಾರಿಗೂ ಎಂದಿನಂತೆಯೇ ಸಹಕಾರ ನೀಡಿ ಎಂದರು.
ಈ ಸಂದರ್ಭ ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಮುಡಾ ಆಯುಕ್ತ ದಿನೇಶ್ ಕುಮಾರ್ ಇದ್ದರು.