ಜಗದ್ಗುರುವಾಗಿದ್ದ ರಾಜೇಂದ್ರ ಶ್ರೀಗಳು

sutturu math
Published on

ಮೈಸೂರು: ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಇತ್ತೀಚೆಗೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 108ನೇ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ವಿಶ್ರಾಂತ ಸಂಸ್ಕೃತ ಪ್ರಾಧ್ಯಾಪಕ ಪ್ರೊ.ಎಚ್.ವಿ. ನಾಗರಾಜರಾವ್ ಮಾತನಾಡಿ, ರಾಜೇಂದ್ರ ಶ್ರೀಗಳು ಗುರುಗಳಿಗೆ ಗುರುಗಳಾಗಿ ಜಗದ್ಗುರು ಆಗಿ ಸುತ್ತೂರು ಮಠವನ್ನು ಹತ್ತೂರು ಮಠವಾಗಿ ಬಿತ್ತರಿಸಿ ಎತ್ತರಕ್ಕೆ ಕೊಂಡೊಯ್ದರು. ಅವರ ಮಾತಿನಲ್ಲಿ ಮತ್ತು ಕಾರ್ಯದಲ್ಲಿ ಏಕತ್ವವಿತು ಎಂದರು.


ರಾಜೇಂದ್ರ ಶ್ರೀಗಳ ವ್ಯಕ್ತಿತ್ವದಲ್ಲಿ ಆಡಂಬರ, ಅಹಂಕಾರ ಇರಲಿಲ್ಲ. 1940-50ರ ದಶಕದಲ್ಲಿ ದೇಶದ ಜನರಿಗೆ ಸರ್ಕಾರ ಆಹಾರ ನೀಡುವುದು ಕಷ್ಟದ ಕೆಲಸವಾಗಿತ್ತು. ಅಂತಹ ಕಷ್ಟದ ಸಂದರ್ಭಗಳಲ್ಲಿ ಶ್ರೀಗಳು ಬಡವರಿಗೆ, ವಿದ್ಯಾರ್ಥಿಗಳಿಗೆ ಜಾತಿ, ಮತ ಭೇದವಿಲ್ಲದೆ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟರು. ಈ ದಿನ ದೇಶ ವಿದೇಶಾದ್ಯಂತ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಅವರ ಕಷ್ಟಕಾಲದಲ್ಲಿ ಜಾತಿ, ಭೇದವಿಲ್ಲದೆ ಅವರಿಗೆ ಅನ್ನದಾನ, ವಿದ್ಯಾದಾನ ನೀಡಿದ್ದರು ಎಂದು ಸ್ಮರಿಸಿದರು.


20ನೇ ಶತಮಾನದಲ್ಲಿ ಜೆಎಸ್‌ಎಸ್ ಸಂಸ್ಥೆಯು ದೇಶಾದ್ಯಂತ ಪ್ರಸರಿಸಿತು. ಈಗಿನ ಶ್ರೀಗಳು ಸಂಸ್ಥೆಯನ್ನು ಪ್ರಪಂಚಾದ್ಯಂತ ಬಿತ್ತರಿಸಿದ್ದಾರೆ ಎಂದು ತಿಳಿಸಿದರು.


ಜೆಎಸ್‌ಎಸ್ ಮಹಾವಿದ್ಯಾಪೀಠದ ಲೆಕ್ಕ ಮತ್ತು ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ ಮಾತನಾಡಿ, ಶ್ರೀಗಳ ಅನ್ನ ದಾಸೋಹ, ಅಕ್ಷರ ದಾಸೋಹ, ಅಧ್ಯಾತ್ಮ, ಆರೋಗ್ಯ ಸೇವೆ ಮತ್ತು ಸಮಾಜ ಸೇವೆ ಸ್ಮರಿಸಿದರು.


ಜಯಂತಿ ಅಂಗವಾಗಿ ಅಂಗವಿಕಲರಿಗೆ ಆಸರೆ ಗ್ರೂಪ್ ವತಿಯಿಂದ ಉಚಿತವಾಗಿ ಗಾಲಿಕುರ್ಚಿ ಮತ್ತು ಕೃತಕಾಂಗ ವಿತರಿಸಲಾಯಿತು. ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಬಸವನಗೌಡಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು, ಡಾ. ಪುರುಷೋತ್ತಮ ಶಾಸ್ತ್ರಿ, ಆಸರೆ ಗ್ರೂಪ್‌ನ ನಿತಿನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net