

ಸಕಲೇಶಪುರ: ಮಠಕಟ್ಟುವ ಮುನ್ನ ಶಾಲೆಕಟ್ಟಿದವರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳು ಎಂದು ಶಿವಗಂಗೆಯ ಶ್ರೀ ಮೆಲಣಗವಿ ವೀರಸಿಂಹಾಸನ ಮಠದ ಡಾ.ಶ್ರೀ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು, ಮಲೆನಾಡು ವೀರಶೈವ ಸಮಾಜ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಗರುವೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶತಮಾನದ ಹಿಂದೆಯೇ ಶಿಕ್ಷಣದ ಮಹತ್ವದ ಬಗ್ಗೆ ಅರಿತಿದ್ದ ಶ್ರೀಗಳು ಜಾತಿಮತ ಪಂಥದ ತಾರತಮ್ಯವಿಲ್ಲದೆ ವಿದ್ಯೆ ನೀಡುವ ಮೂಲಕ ಕೋಟ್ಯಂತರ ಜನರ ಬಾಳಿಗೆ ಬೆಳಕಾದರು. ಮಾತನಾಡುವ ಅನಿವಾರ್ಯತೆ ಸೃಷ್ಟಿಯಾದರೆ ಮಾತ್ರ ಮಾತನಾಡಬೇಕು. ಇದರಿಂದ ಗೌರವ ಹೆಚ್ಚಲಿದೆ. ಮೌನಕ್ಕೆ ಇರುವ ಬೆಲೆ ಮತ್ತೊಂದಕ್ಕೆ ಇಲ್ಲ. ಮಾಡುವ ಕೆಲಸದ ಬಗ್ಗೆ ಏಕಾಗ್ರತೆ ಹೊಂದಿದವರು ಮಾತ್ರ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದರು.
ನಮಗೆ ಗೌರವ ಧಕ್ಕುವುದು ನಾವು ಮಾಡುವ ಸಾಧನೆಯಿಂದ ಹೊರತು ಹಾಕುವ ಬಟ್ಟೆಯಿಂದಲ್ಲ. ಅನ್ಯರಿಗೆ ಸಹಾಯ ಮಾಡುವುದರಿಂದ ಮಾತ್ರ ಹೆಸರು ಚಿರಸ್ಥಾಯಿಯಾಗಲಿದೆ. ಮೂರು ವರ್ಷದ ವಿದ್ಯೆ ನೂರು ವರ್ಷದವರೆಗೆ ಬಾಳಿಕೆ ಬರಲಿದೆ. ಆದ್ದರಿಂದ ಶಿಕ್ಷಣದ ಸಮಯದಲ್ಲಿ ಏಕಾಗ್ರತೆಯಿಂದ ವಿದ್ಯೆ ಕಲಿಯಬೇಕು ಎಂದ ಅವರು, ವಿದ್ಯಾವಂತರನ್ನು ಹಣವೇ ಹುಡುಕಿಕೊಂಡು ಬಂದರೆ, ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವುದು ವಿದ್ಯೆ ಮಾತ್ರ ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮಾತು ಸಾಧನೆಯಾಗಬಾರದು. ಬದಲಾಗಿ ಸಾಧನೆ ಮಾತಾಗಬೇಕು. ಈ ವಿಚಾರದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನುಕರಣೀಯ. ವಿದ್ಯಾಭ್ಯಾಸದ ಪರಿಕಲ್ಪನೆ ಇಲ್ಲದ ವೇಳೆ ಅಕ್ಷರ ಕಲಿಸುವ ದೀಕ್ಷೆತೊಟ್ಟ ಶ್ರೀಗಳು ಪ್ರಪಂಚ ಇರುವವರಗೂ ಆದರ್ಶನೀಯವಾಗಿ ಉಳಿಯಲಿದ್ದಾರೆ. ವೀರಶೈವ ಮಠಗಳು ಒಂದು ಸರ್ಕಾರ ಮಾಡಲಾಗದ ಕೆಲಸಗಳನ್ನು ಮಾಡುತ್ತಿವೆ. ವಿದ್ಯೆ ಎಲ್ಲ ಪದವಿಗಳಿಗಿಂತ ಮಿಗಿಲು. ವಿದ್ಯೆ ಒಂದಿದ್ದರೆ ಬಡತನ ಬರಲಾರದು ಎಂದ ಅವರು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ತಾಲೂಕಿನಲ್ಲಿರುವುದು ನಮ್ಮ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಕಲೇ ಶ್ವರಸ್ವಾಮಿ ದೇವಸ್ಥಾನದಿಂದ ಸಭಾಭವನದವರಗೆ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಮೂಗಲಿ ಧರ್ಮಣ್ಣ ವಹಿಸಿದ್ದರು. ವೇದಿಕೆಯಲ್ಲಿ ಬಾಳ್ಳುಬಸವಣ್ಣ, ನಾರ್ವೇ ಶಿವಪ್ರಸಾದ್, ವಿದ್ಯಾಶಂಕರ್, ಯುವಘಟಕದ ಅಧ್ಯಕ್ಷ ಶಶಿಕುಮಾರ್, ಲೋಹಿತ್‌ಕೌಡಳ್ಳಿ, ಕೌಡಳ್ಳಿ ಜೆಎಸ್‌ಎಸ್ ಶಾಲೆಯ ಪ್ರಾಂಶುಪಾಲ್ ನಂಜುಡಪ್ಪ, ಆರ್.ಮಂಜುನಾಥ್ ಮುಂತಾದವರಿದ್ದರು.