

ಮೈಸೂರು: ರಾಜೇಂದ್ರ ಶ್ರೀಗಳು ಜನರೊಂದಿಗೆ ಬೆರತು ಅವರ ಸಮಸ್ಯೆಗಳನ್ನು ಅರಿತು ಅವುಗಳನ್ನು ಬಗೆಹರಿಸುತ್ತಿದ್ದರು. ಅಲ್ಲದೆ ಲಕ್ಷಾಂತರ ಜನರಿಗೆ ಭವಿಷ್ಯ ನೀಡುವ ಜ್ಞಾನದ ಜ್ಯೊತಿಯನ್ನು ಹಚ್ಚಿದವರು ಎಂದು ಬಿಳಿಗಿರಿರಂಗನಬೆಟ್ಟದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸ್ಮರಿಸಿದರು.
ಜೆಎಸ್‌ಎಸ್ ನರ್ಸಿಂಗ್ ಕಾಲೇಜು, ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ, ಜೆಎಸ್‌ಎಸ್ ಕಾಲೇಜ್ ಆಫ್ ಫಿಸಿಯೋಥೆರಪಿ, ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್‌ನಿಂದ ಶುಕ್ರವಾರ ಜೆಎಸ್‌ಎಸ್ ಆಸ್ಪತ್ರೆಯ ಡಾ.ಶ್ರೀಶಿವರಾತ್ರಿರಾಜೇಂದ್ರ ಸ್ವಾಮೀಜಿ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ರಾಜೇಂದ್ರ ಶ್ರೀಗಳ 110 ನೇ ಜಯಂತಿ ಮಹೋತ್ಸವದಲ್ಲಿ ಮಾತನಾಡಿದರು.
ದೇಶ-ವಿದೇಶಗಳಲ್ಲಿ ನೂರಾರು ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅಕ್ಷರ ದಾಸೋಹ ಮಾಡಿದರು. ಸಾವಿರಾರು ವೇದಿಕೆಗಳಲ್ಲಿ ಉಪದೇಶಗಳನ್ನು ನೀಡುವ ಮೂಲಕ ಜನರು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಿದರು. ಅಜ್ಞಾನ, ಅಂಧಕಾರಕ್ಕೆ ತಮ್ಮ ದಿವ್ಯ ಉಪದೇಶದ ಔಷಧ ನೀಡಿದ ಈ ಶ್ರೇಷ್ಠ ಯತಿಗಳ ಸೇವೆಯನ್ನು ಗುರುತಿಸಿ ಮೈಸೂರು ಮಹಾರಾಜರು ರಾಜಗುರು ತಿಲಕ ಎನ್ನುವ ಬಿರುದು ನೀಡಿ ಗೌರವಿಸಿದ್ದರು ಎಂದರು.
ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಗುಣಾತ್ಮಕ ಶಿಕ್ಷಣದೊಂದಿಗೆ ಮಕ್ಕಳ ಜೀವನದುದ್ದಕ್ಕೂ ಅನುಕೂಲವಾಗುವಂತಹ ಸಂಸ್ಕಾರವೂ ಸಿಗುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ, ದಾಸೋಹ, ಆರೋಗ್ಯ ದೊರೆಯುವಂತಾಗಿದೆ ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ ಮಾತನಾಡಿ, ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಚಂಚಲತೆ ಹೆಚ್ಚಾಗುತ್ತಿದೆ. ಏಕಾಗ್ರತೆ ಇಲ್ಲದೆ ಎಂತಹ ಮುಖ್ಯ ಕಾರ್ಯಕ್ರಮವಿದ್ದರೂ ಅದನ್ನು ಆಲಿಸದೆ ಮೊಬೈಲ್ ಮೊರೆ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಏಕಾಗ್ರತೆ ಇದ್ದರೆ ಎಂತಹ ಹುದ್ದೆಯನ್ನು ಪಡೆಯಲು ಸಾಧ್ಯ. ಈ ಮೂಲಕ ತಮ್ಮ ಜೀವನವನ್ನು ಸುಧಾರಿಸಿಕೊಳ್ಳಬಹುದು. ಇಂತಹ ಕಾರ್ಯವನ್ನು ಶ್ರೀಗಳು ಯಶಸ್ವಿಯಾಗಿ ಮಾಡಿದ್ದರು. ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸುವ ಶಿಸ್ತಿನ ಪಾಠವೇ ಇದಕ್ಕೊಂದು ಉದಾಹರಣೆ ಎಂದರು.
ಬಸವಣ್ಣನವರ ಆಶಯಗಳನ್ನು ಗುರಿಯಾಗಿಸಿಕೊಂಡು ಮುನ್ನಡೆಯುತ್ತಿರುವ ಜೆಎಸ್‌ಎಸ್ ಸಂಸ್ಥೆಗಳಲ್ಲಿ ಸಂಸ್ಕೃತಿ, ಧರ್ಮ, ಸಮಾಜ ಸೇವೆಯಂತಹ ಮೌಲ್ಯಗಳನ್ನು ತುಂಬುವ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಆರೋಗ್ಯಕರ ಬದಲಾವಣೆಗಳನ್ನು ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್. ಮಹೇಶ್, ಪ್ರಾಂಶುಪಾಲರಾದ ಎಂ.ಕೆ.ಅಶ್ವತಿ ದೇವಿ ಇತರರು ಇದ್ದರು.