ನಾಡಿಗೆ ರಾಜೇಂದ್ರ ಶ್ರೀಗಳ ಕೊಡುಗೆ ಅಪಾರ

12 oct tnp 01
Published on

ತಿ.ನರಸೀಪುರ : ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ನಾಡಿಗೆ ನೀಡಿದ ಕೊಡುಗೆ ಅಪಾರ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಆಚರಣಾ ಸಮಿತಿಯಿಂದ ಪಟ್ಟಣದ ವಿದ್ಯೋದಯ ಕಾಲೇಜು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳ 109 ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಎಲ್ಲೆಡೆ ಮಠ, ಮಾನ್ಯಗಳು ತಮ್ಮ ಸೇವಾ ಕ್ಷೇತ್ರವನ್ನು ಒಂದು ಅರ್ಥದಲ್ಲಿ ವಿಭಿನ್ನವಾದ ರೀತಿಯಲ್ಲಿ ವಿಸ್ತರಿಸಿಕೊಂಡು ಹೋಗಿವೆ. ನಮ್ಮ ಭಾಗದಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ, ಶ್ರಿ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿ, ಚಿತ್ರದುರ್ಗದಲ್ಲಿ ಜಯದೇವ ಸ್ವಾಮೀಜಿ, ಸಿರಿಗೆರೆಯಲ್ಲಿ ಶಿವಕುಮಾರಸ್ವಾಮೀಜಿ, ಧಾರವಾಡದ ಮುರುಘಾಮಠದಲ್ಲಿ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಇತರರು ರಾಜ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದರು.

ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ ಮಾತನಾಡಿ, ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರಿಗೆ ಸಮಾಜದ ಬಗ್ಗೆ ದೂರದೃಷ್ಟಿ ಇತ್ತು. ಈ ಕಾರಣಕ್ಕಾಗಿ ಶಿಕ್ಷಣ ಮತ್ತು ಆಧ್ಯಾತ್ಮಿಕ ಸಂಸ್ಕಾರದಲ್ಲಿ ಸುತ್ತೂರು ಮಠ ಹೆಮ್ಮರವಾಗಿ ಬೆಳೆದಿದೆ. ಗ್ರಾಮೀಣ ಭಾಗದ ಬಡವರು ಮತ್ತು ಅಶಕ್ತರಿಗೆ ಶಿಕ್ಷಣ ಮತ್ತು ಅನ್ನ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳನ್ನು ಮುಖ್ಯವಾಹಿನಿಗೆ ತಂದು ಶ್ರೀ ಮಠ ಬೆಳೆಸಿದೆ ಎಂದು ಮೆಚ್ಚುಗೆ ನುಡಿಗಳನ್ನಾಡಿದರು.

ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಿನಕಲ್ ಬಸವರಾಜು, ಹಿರಿಯ ವಕೀಲ ಸಿ.ಎಂ.ಜಗದೀಶ್ ಮಾತನಾಡಿದರು. ಬಾಗಳಿ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿ ಜ್ಯೋತಿ ಪರಮೇಶ್, ರಾಜೇಂದ್ರ ಶ್ರೀಗಳಿಗೆ ನುಡಿ ನಮನ ಸಲ್ಲಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸುತ್ತೂರು ಶಿವರಾತ್ರಿ ದೇಶಿಕೇಂದ್ರದ ಶ್ರೀಗಳನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಮೂಲಕ ಕಾಲೇಜು ವೃತ್ತಕ್ಕೆ ಕರೆತರಲಾಯಿತು. ಕಾಲೇಜಿನ ಪ್ರವೇಶ ದ್ವಾರದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ರಾಜೇಂದ್ರ ಸ್ವಾಮಿಗಳ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲಾಯಿತು.

ಮದ್ಗಾರ ಲಿಂಗಯ್ಯನ ಹುಂಡಿ ವಿರಕ್ತ ಮಠದ ಗೌರಿ ಶಂಕರಸ್ವಾಮೀಜಿ, ಸಿದ್ದರಹಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಾಡ್ರಹಳ್ಳಿ ಪಟ್ಟದ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಮುಡುಕನಪುರ ಮಠದ ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ, ಮುಡುಕುತೊರೆ ಕಲ್ಲು ಮಠದ ನಂದಿಕೇಶ್ವರ ಸ್ವಾಮೀಜಿ, ಮೈಮಲ್ ಮಾಜಿ ಅಧ್ಯಕ್ಷ ಸಿ.ಓಂಪ್ರಕಾಶ್, ಬೆನಕನಹಳ್ಳಿ ಎಂ.ಶಿವಮಲ್ಲಪ್ಪ, ಬಸವ ಬಳಗದ ಅಧ್ಯಕ್ಷ ಹಲವಾರ ಪರಮೇಶ್ ಪಟೇಲ್, ನಿರ್ದೇಶಕ ಸುಗಂಧರಾಜು, ದೊಡ್ಡನಹುಂಡಿ ನಂಜುಂಡಸ್ವಾಮಿ, ಎಂ.ದಯಾನಂದ್, ಹೋಟೆಲ್ ರಾಜಣ್ಣ, ಎಂ.ಎಲ್.ನಮಿತ್‌ರಾಜ್, ಶಿವಕುಮಾರ್, ಜಿ.ಎಲ್.ಯೋಗೇಶ್, ತೊಟ್ಟವಾಡಿ ಶಿವಕುಮಾರ್, ರವಿ, ಚಂದ್ರಧರ, ವಾಸವಳ್ಳಿ ಉಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net