

ಗುಂಡ್ಲುಪೇಟೆ: ಪಟ್ಟಣದಲ್ಲಿ ಮಂಗಳವಾರ ಸುತ್ತೂರು ಮಠದ ಲಿಂಗೈಕ್ಯ ಶ್ರೀಶಿವರಾತ್ರಿ ರಾಜೇಂದ್ರ ಶ್ರೀಗಳ 108ನೇ ಜಯಂತಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಅಂಗವಾಗಿ ಅಲಂಕೃತ ವಾಹನದಲ್ಲಿ ರಾಜೇಂದ್ರ ಶ್ರೀಗಳ ಭಾವಚಿತ್ರವನ್ನು ಇರಿಸಿ ಮಂಗಳವಾದ್ಯ ಹಾಗೂ ಕಲಾ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ರಾಜೇಂದ್ರ ಶ್ರೀಗಳು ತಮ್ಮ ಜೀವನವನ್ನು ಜನಸೇವೆಗಾಗಿಯೇ ಮುಡಿಪಾಗಿಟ್ಟಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೆಎಸ್‌ಎಸ್ ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬೆಳೆದು ಬಂದಿದೆ. ಇಂದಿಗೂ ಅಕ್ಷರ, ಆರೋಗ್ಯ, ಶಿಕ್ಷಣದಂತ ದಾಸೋಹವನ್ನು ಎಲ್ಲ ವರ್ಗದ ಜನತೆಗೂ ನೀಡುವ ಮೂಲಕ ಶ್ರೀಗಳ ಆಶಯವನ್ನು ಈಡೇರಿಸುತ್ತಿದೆ ಎಂದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಸಚಿವೆ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷೆ ಡಾ.ಗೀತಾ ವಹದೇವ ಪ್ರಸಾದ್, ಮಾಜಿ ಶಾಸಕ ಸಿ.ಎಸ್.ನಿರಂಜನ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ನಂಜಪ್ಪ ಸೇರಿದಂತೆ ವೀರಶೈವ ಸಮಾಜದ ಮುಖಂಡರು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ಭಕ್ತರು ಇದ್ದರು.