

ಮೈಸೂರು: ಜೆಎಸ್‌ಎಸ್ ಸರಸ್ವತಿಪುರಂ ಸಮುಚ್ಛಯದಲ್ಲಿ ಶನಿವಾರ ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತ್ಯುತ್ಸವ ಏರ್ಪಡಿಸಲಾಗಿತ್ತು.
ಮೈಸೂರು ವಿಶ್ವ ವಿದ್ಯಾಲಯದ ಪ್ರಾಚ್ಯವಿದ್ಯಾಸಂಶೋಧನಾಲಯದ ನಿವೃತ್ತ ನಿರ್ದೇಶಕ ಡಾ.ಎಸ್. ಶಿವರಾಜಪ್ಪ ಮಾತನಾಡಿ, ಬಡವರ್ಗದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ, ಆರೋಗ್ಯ ಹಾಗೂ ವಸತಿ ನಿಲಯಗಳನ್ನು ಕಲ್ಪಿಸಿ ಅವರ ಬದುಕಿನಲ್ಲಿ ಮಹತ್ವದ ಬದಲಾವಣೆ ತಂದಿರುವ ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮೀಜಿ ಎಲ್ಲರ ಮನ ಮನೆಯಲ್ಲಿ ನಿರಂತರ ಬೆಳಗುವ ಮಹಾಜ್ಯೋತಿ ಎಂದು ಬಣ್ಣಿಸಿದರು.
ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕೋಸ್ಕರ ಶ್ರೀಗಳು ತಮ್ಮ ಚಿನ್ನದ ಕರಡಿಗೆಯನ್ನು ಅಡವಿಟ್ಟರು.1946ರಲ್ಲೇ ಅಂದರೆ ಸ್ವಾತಂತ್ರೃ ಪೂರ್ವದಲ್ಲೇ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾದರು. ಗೌತಮಬುದ್ಧ, ಬಸವಣ್ಣ ಅವರು ಕರುಣೆ, ಕಾಯಕದ ಮೂಲಕ ವಿಶ್ವಪ್ರಸಿದ್ಧರಾದರೆ, ರಾಜೇಂದ್ರಶ್ರೀ ಶಿಕ್ಷಣ, ಸಾಮಾಜಿಕ ಸುಧಾರಣೆ ಮೂಲಕ ಜಗದ್ಗುರು ಆದರು ಎಂದು ಹೇಳಿದರು.
ತಿ.ನರಸೀಪುರ ವಿದ್ಯೊದಯ ಪ್ರಥಮ ದರ್ಜೆಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಸಿ.ಜೆ.ಉಷಾದೇವಿ ಮಾತನಾಡಿ, ರಾಜೇಂದ್ರಶ್ರೀ ಜ್ಞಾನದಾಸೋಹ, ಆರೋಗ್ಯ, ಸಂಸ್ಕೃತಿ, ಸಾಹಿತ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಗೈದ ಮಹಾಮಹಿಮರು. ಸಕಲ ಜೇವಾತ್ಮರಿಗೆ ಲೇಸನ್ನು ಬಯಸಿದ ಸಂತ ಎಂದು ಬಣ್ಣಿಸಿದರು.
2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅನನ್ಯ ಪಿ.ರೇವಣ್‌ಕರ್ ಅವರಿಗೆ ಅನ್ನಪೂರ್ಣಮ್ಮ ದತ್ತಿ ವತಿಯಿಂದ ನಗದು ಬಹುಮಾನ ನೀಡಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಸಮುಚ್ಛಯದ ಮುಖ್ಯ ನಿಲಯಪಾಲಕಿ ಮಮತಾ ಸುರೇಶ್, ಸರಸ್ವತಿಪುರಂ ಸಮುಚ್ಛಯದ ಡಿಇಎಲ್‌ಇಡಿ, ಪ್ರೌಢಶಾಲೆ, ಪ್ರಾಯೋಗಿಕ ಪ್ರಾಥಮಿಕಶಾಲೆ ಹಾಗೂ ಸಹನಾ ಶಾಲೆಗಳ ಮುಖ್ಯಸ್ಥರುಗಳು, ಶಿಕ್ಷಕರು, ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.