

ಮೈಸೂರು: ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಆದಿಕವಿ ವಾಲ್ಮೀಕಿಯ ದಯೆ-ಕರುಣೆ, ವ್ಯಾಸರ ಲೌಕಿಕ ಜ್ಞಾನ, ಅಗಸ್ತ್ಯ ಮುನಿಗಳ ಭಾವೈಕ್ಯತೆ, ರಮಣ ಮಹರ್ಷಿಗಳ ಆತ್ಮಸಾಕ್ಷಾತ್ಕಾರ, ರಾಮಕೃಷ್ಣ ಪರಮಹಂಸರ ಪ್ರೀತಿ, ಅರವಿಂದರ ಮುಂಗಾಣ್ಕೆ- ಈ ಎಲ್ಲ ಮಹಾನ್ ವ್ಯಕ್ತಿಗಳ ಗುಣಗಳ ಸಂಗಮವಾಗಿದ್ದರು ಎಂದು ವಿಶ್ರಾಂತ ಪ್ರಾಂಶುಪಾಲ ಡಾ. ಚಂದ್ರಶೇಖರಯ್ಯ ಹೇಳಿದರು.
ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯವರ ಜಯಂತಿ ಮಹೋತ್ಸವದಲ್ಲಿ ಮಾತನಾಡಿದರು.
ಶ್ರೀಗಳು ಶಾಶ್ವತವಾಗಿ ನಮ್ಮ ಹೃದಯಗಳಲ್ಲಿ ನೆಲೆಸಿರುವ ಅಮರರು. ಬಹಳ ಜನರಿಗೆ ಪ್ರೇರಕಶಕ್ತಿಯಾಗಿ, ಮಾರ್ಗದರ್ಶಕರಾಗಿ ಇದ್ದವರು. ಅವರ ಬಗ್ಗೆ ಬರೆಯುವುದಾದರೆ ಬೃಹತ್ ಗ್ರಂಥವನ್ನೇ ರಚಿಸಬೇಕಾಗುತ್ತದೆ. ಅವರು ಬಹುಮುಖ ಪ್ರತಿಭೆಯುಳ್ಳವರು. ಸಾವಿರ ವರ್ಷಗಳ ಇತಿಹಾಸವಿರುವ ಸುತ್ತೂರು ಮಠದ ಹಿನ್ನೆಲೆಯನ್ನು ಗಮನಿಸುವುದಾದರೆ ಶ್ರೀಗಳಿಂದಲೇ ಸುವರ್ಣ ಯುಗ ಪ್ರಾರಂಭವಾಯಿತು. ಅವರ ಸಾಧನೆಗಳೇ ಐತಿಹಾಸಿಕ ದಾಖಲೆಯಾಯಿತು ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಿಸಿದರು.
ಶ್ರೀಗಳು 1932-35ರ ಅವಧಿಯಲ್ಲಿ ಮೈಸೂರಿಗೆ ಬಂದಾಗ ಭಾರತದ ಸ್ವಾತಂತ್ರ್ಯ ಹೋರಾಟದ ಅಂಗವಾಗಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮೈಸೂರು ಕೂಡ ಭಾಗಿಯಾಗಿತ್ತು. ಶ್ರೀಗಳ ಮುಂದೆ ಆಗ ಎರಡು ಆಯ್ಕೆ ಇತ್ತು. ಒಂದು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು. ಮತ್ತೊಂದು ಅವರೇ ಕಣ್ಣಾರೆ ಕಂಡ ಬಡ ವಿದ್ಯಾರ್ಥಿಗಳ ಶಿಕ್ಷಣ, ವಸತಿ ಮತ್ತು ಆಹಾರಕ್ಕಾಗಿ ಪಡುತ್ತಿದ್ದ ಬವಣೆಯನ್ನು ನೀಗಿಸುವುದು. ಶ್ರೀಗಳು ತಮ್ಮ ಲೌಕಿಕ ಆಶೋತ್ತರಗಳನ್ನು ತ್ಯಜಿಸಿ, ಬಡ ವಿದ್ಯಾರ್ಥಿಗಳ ಶಿಕ್ಷಣ, ವಸತಿ ಮತ್ತು ಆಹಾರದ ನೆರವು ನೀಡುವಲ್ಲಿ ತಮ್ಮ ಪಾತ್ರ ಮಹತ್ತರವಾದದ್ದು ಎಂದು ಭಾವಿಸಿ ದಕ್ಕಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟರು ಎಂದರು.
ವಾಟಾಳು ಶ್ರೀ ಸೂರ್ಯಸಿಂಹಾಸನ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜೇಂದ್ರ ಶ್ರೀಗಳವರೊಂದಿಗೆ ನನ್ನ ಒಡನಾಟ ನನಗೆ ಮಾರ್ಗದರ್ಶನವಾಗಿದೆ. ಅವರ ಮಾತೃಹೃದಯದ ವಾತ್ಸಲ್ಯದ ಸವಿಯನ್ನು ಉಂಡವನು ನಾನು. ಶ್ರೀಗಳಿಗೆ ಜೀವಿಗಳ ಮೇಲೆ ಮಾತ್ರವಲ್ಲ, ನಿರ್ಜೀವ ವಸ್ತುಗಳ ಮೇಲೂ ಅಪಾರ ಮಮತೆ ಇತ್ತು. ಬಡತನದಿಂದ ಓದಲು ತೊಂದರೆಯಾಗಿ ಆಸರೆ ಬಯಸಿ ಬಂದ ಅನೇಕರಿಗೆ ಶಿಕ್ಷಣದ ಜತೆಗೆ ಊಟ ಮತ್ತು ಆರ್ಥಿಕ ನೆರವನ್ನೂ ನೀಡಿದರು ಎಂದರು.
ಕಾಲೇಜಿನ ಮುಖ್ಯ ಕಾರ್ಯ ನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿದರು. ಸ್ನಾತಕೋತ್ತರ, ಸ್ನಾತಕ ಮತ್ತು ಪದವಿ ಪೂರ್ವ ವಿಭಾಗಗಗಳಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ದತ್ತಿ ಪುರಸ್ಕಾರ, ರಾಜೇಂದ್ರ ಶ್ರೀಗಳ ಸ್ಮರಣಾರ್ಥ ಏರ್ಪಡಿಸಿದ್ದ ಅಂತರ ಕಾಲೇಜು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭು, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಲ್.ವಿನಯ್ ಕುಮಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಸೋಮಶೇಖರ್, ಕಾರ್ಯಕ್ರಮದ ಸಂಚಾಲಕರಾದ ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಬಿ. ಪ್ರಭುಸ್ವಾಮಿ, ಪದವಿಪೂರ್ವ ವಿಭಾಗದ ಎಚ್. ಪಿ. ಮಹದೇವಸ್ವಾಮಿ ಉಪಸ್ಥಿತರಿದ್ದರು.