

ಶೃಂಗೇರಿ: ಕ್ಷೇತ್ರದ ಹೆಮ್ಮೆಯ ರಾಜಕಾರಣಿ, ದೂರದೃಷ್ಠಿತ್ವ ಹೊಂದಿದ್ದ ಮಡಬೂರು ರಾಜೇಂದ್ರ ಅವರಿಗೆ ಆ.16 ರಂದು ಕೊಪ್ಪದಲ್ಲಿ ನುಡಿ ನಮನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ನುಡಿ ನಮನ ಸಮಿತಿ ಅಧ್ಯಕ್ಷ ಎಚ್.ಜಿ.ವೆಂಕಟೇಶ್ ಹೇಳಿದರು. ಎಚ್.ಟಿ.ರಾಜೇಂದ್ರ ನುಡಿ ನಮನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಕ್ಷಾತೀತ ನಾಯಕರಾಗಿದ್ದ ಅವರು ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನುಡಿ ನಮನ ಕಾರ್ಯಕ್ರಮದಲ್ಲಿ ರಾಜೇಂದ್ರ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ ಎಂದರು.
ಗಿಣಕಲ್ ಭರತ್ ಗೌಡ ಮಾತನಾಡಿ, ರಾಜೇಂದ್ರ ಅವರು ರಾಜಕೀಯ ಹೊರತಾಗಿಯೂ ಕ್ಷೇತ್ರದ ನಾಯಕರಾಗಿದ್ದರು. ರಾಜ್ಯದ ಮುಖಂಡರಾಗಿ ಅವರ ಸೇವೆ ಗಮನಾರ್ಹ. ಶಾಸಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರಕದಿದ್ದರೂ ಸಾಮಾನ್ಯ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಶೃಂಗೇರಿ ಕನ್ನಡ ಸಾಹಿತ್ಯ ಪರಿಷತ್‌ಗೆ ಅವರ ಹೆಸರಿನಲ್ಲಿ ಶಾಶ್ವತ ದತ್ತಿನಿಧಿ ಸ್ಥಾಪಿಸಲಾಗುತ್ತದೆ ಎಂದರು.
ಮುಖಂಡರಾದ ಕಲ್ಕುಳಿ ವಿಠ್ಠಲ ಹೆಗ್ಡೆ, ನೆಂಪೆ ದೇವರಾಜ್, ಕೆ.ಎಂ.ಶ್ರೀನಿವಾಸ್, ಕೆ.ಸಿ.ವೆಂಕಟೇಶ್, ಎಚ್.ಕೆ.ದಿನೇಶ್ ಹೆಗ್ಡೆ, ಕೆ.ಎಸ್.ವೆಂಕಟೇಶ್, ಎಂ.ಸಿ.ಅಚ್ಚುತ, ಅನಿಲ್ ಹೊಸಕೊಪ್ಪ, ಮಹೇಶ್ ಇತರರು ಇದ್ದರು.