ಕೆಂಪೇಗೌಡ ಬಸ್​ ನಿಲ್ದಾಣ ಬಳಿ ಸಂಚಾರಿ ಶೌಚಗೃಹಗಳ ಅಳವಡಿಸಿ: ಅಧಿಕಾರಿಗಳಿಗೆ ರಾಜೇಂದ್ರ ಚೋಳನ್ ಸೂಚನೆ

cholan
Published on

ಬೆಂಗಳೂರು: ನಗರದ ಕೆಂಪೇಗೌಡ ಬಸ್ ನಿಲ್ದಾಣ ಸಮೀಪ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ನಿಯಂತ್ರಿಸಲು ‘ಮೊಬೈಲ್ ಶೌಚಗೃಹ’ ನಿರ್ಮಿಸುವಂತೆ ಅಧಿಕಾರಿಗಳಿಗೆ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಸೂಚಿಸಿದ್ದಾರೆ.

ಕೊಳೆಗೇರಿ ಅಭಿವೃದ್ಧಿ ಮಂಡಳಿ ಮುಂಭಾಗದ ಆಟೋ ಟಿಪ್ಪರ್ ಮಸ್ಟರಿಂಗ್ ಕೇಂದ್ರ ಸೇರಿ ಕೆಂಬನಿ ಸುತ್ತಮುತ್ತ ಪ್ರದೇಶಗಳಲ್ಲಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು. ಕೆಂಬನಿ ಪ್ರದೇಶದಲ್ಲಿ ಪಾದಚಾರಿಗಳ ಸಂಚಾರ ಹೆಚ್ಚಿರುವುದರಿಂದ ಸಂಚಾರಿ ಶೌಚಗೃಹ ವ್ಯವಸ್ಥೆ ಮಾಡಬೇಕು. ಇದರಿಂದ ಪಾದಚಾರಿ ಮಾರ್ಗ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ಕಡಿಮೆಯಾಗಬಹುದು. ತ್ಯಾಜ್ಯ ಸಾಗಣೆ ಆಟೋ ಟಿಪ್ಪರ್ ಚಾಲಕರು ಮತ್ತು ಸಿಬ್ಬಂದಿ ಸಮರ್ಪಕವಾಗಿ ಸುರಕ್ಷಾ ಸಾಮಗ್ರಿ ಬಳಸಿ ಕಾರ್ಯನಿರ್ವಹಿಸಬೇಕು. ಮಸ್ಟರಿಂಗ್ ಕೇಂದ್ರಗಳಲ್ಲಿ ಪ್ರತಿನಿತ್ಯ ಬೆಳಗ್ಗೆ 5.30ರಿಂದ 6.30ರೊಳಗೆ ಹಾಜರಾತಿ ಪೂರ್ಣಗೊಳ್ಳಬೇಕು. ಪೌರಕಾರ್ಮಿಕರು ಶೂ, ಸಮವಸ್ತ್ರ, ಕೈಗವಸುಗಳನ್ನು ತಪ್ಪದೆ ಧರಿಸಬೇಕು. ಕಟ್ಟಡ ಭಗ್ನಾವಶೇಷಗಳು, ಬ್ಲ್ಯಾಕ್‌ಸ್ಪಾಟ್ ತೆರವುಗೊಳಿಸಬೇಕು ಎಂದರು.

ಧನ್ವಂತರಿ ರಸ್ತೆಯಲ್ಲಿ ಹಾಕಲಾಗಿರುವ ಕಟ್ಟಡಗಳ ಭಗ್ನಾವಶೇಷ ತೆರವುಗೊಳಿಸಬೇಕು. ಕೆಂಬನಿ ಸುತ್ತಮುತ್ತ ಪ್ರದೇಶದ ಹೋಟೆಲ್‌ಗಳು, ವಾಣಿಜ್ಯ ಮಳಿಗೆಗಳ ಬಳಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಎಲ್ಲ ಮಳಿಗೆಗಳ ಮುಂಭಾಗ ವಿಶೇಷ ಡಸ್ಟ್‌ಬಿನ್ ಅಳವಡಿಸಿಕೊಳ್ಳಬೇಕು. ಇದನ್ನು ಪಾಲಿಸದಿರುವವರಿಗೆ ದಂಡ ವಿಧಿಸಬೇಕು. ಸಣ್ಣ ಜಂಕ್ಷನ್‌ಗಳಲ್ಲಿ ತೋಟಗಾರಿಕಾ ವಿಭಾಗದಿಂದ ಸಸಿ ನೆಡಬೇಕು. ಪಾದಚಾರಿ ಮಾರ್ಗದಲ್ಲಿ ನೆಟ್ಟಿರುವ ಸಸಿಯನ್ನು ಸರಿಯಾಗಿ ಪೋಷಣೆ ಮಾಡಬೇಕು ಎಂದು ರಾಜೇಂದ್ರ ಚೋಳನ್ ಹೇಳಿದರು. ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ಸೇರಿ ಕಾರ್ಯಪಾಲಕ ಅಭಿಯಂತರರ ಇತರರಿದ್ದರು.

ನೋಟಿಸ್ ನೀಡಿ: ಜಲಮಂಡಳಿ, ಬೆಸ್ಕಾಂ ಸೇರಿ ಇತರ ಸಂಸ್ಥೆಗಳು ಪಾದಚಾರಿ ಮಾರ್ಗದಲ್ಲಿ ಪೈಪ್, ತ್ಯಾಜ್ಯ ಮತ್ತು ಸಾಮಗ್ರಿ ಹಾಕಬಾರದು. ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗುವಂತೆ ತ್ಯಾಜ್ಯ ಹಾಕಿದವರಿಗೆ ಕೂಡಲೇ ನೋಟಿಸ್ ನೀಡಬೇಕು. ಬಿನ್ನಿ ಮಿಲ್ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಸೂಕ್ತವಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು. ಪೊಲೀಸ್ ವಸತಿಗೃಹ ಎದುರು ಪಾದಚಾರಿ ಮಾರ್ಗ ಅತಿಕ್ರಮಣವನ್ನು ತೆರವುಗೊಳಿಸಬೇಕು ಎಂದು ರಾಜೇಂದ್ರ ಚೋಳನ್, ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದೇ ವೇಳೆ ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕಕ್ಕೆ ಭೇಟಿ ನೀಡಿ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net