ರಾಜೇಂದ್ರ ಗೆಲುವು ಕೈಗೆ ಬೂಸ್ಟರ್ ಡೋಸ್ ! ; ಜಿಲ್ಲೆಯಲ್ಲಿ ಬಾಡಿದ ಕಮಲ ಬಾಗಿದ ತೆನೆ ಹೊತ್ತ ಮಹಿಳೆ

DSC_7290
Published on

ತುಮಕೂರು : ವಿಧಾನಪರಿಷತ್ ಚುನಾವಣೆ ಫಲಿತಾಂಶವೂ ಕಾಂಗ್ರೆಸ್‌ಗೆ ಜಿಲ್ಲೆಯ ಮಟ್ಟಿಗೆ ‘ಬೂಸ್ಟರ್ ಡೋಸ್’ ಎನಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಆರ್.ರಾಜೇಂದ್ರ ಪವಾಡಸದೃಶ್ಯ ಗೆಲುವು ಬಿಜೆಪಿ, ಜೆಡಿಎಸ್ ಪ್ರತಿಷ್ಠೆಗೆ ಪೆಟ್ಟು ನೀಡಿದೆ. ಒಳ ಏಟಿಗೆ ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್ ಕನಲಿಹೋದರೆ, ಸಂಸದ ಜಿ.ಎಸ್.ಬಸವರಾಜುಗೆ ‘ಲೋಕಸಭೆ’ಯ ಋಣಭಾರ ತೀರಿಸಿದ ಸಮಾಧಾನ ತಂದಿದೆ.

ಲೋಕಸಭೆ ಬಳಿಕ ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಆಘಾತ ನೀಡಿದ್ದ ಜಿಲ್ಲೆಯ ಜನರು ಮತ್ತೊಮ್ಮೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡಗೆ ಶಾಕ್ ಕೊಟ್ಟಿದ್ದು ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಸರ್ಕಾರ ಉನ್ನತ ಹುದ್ದೆ ತ್ಯಜಿಸಿ ರಾಜಕೀಯ ಆಶ್ರಯಕ್ಕೆ ಹಾತೊರೆದಿದ್ದ ಜೆಡಿಎಸ್‌ನ ಆರ್.ಅನಿಲ್‌ಕುಮಾರ್‌ಗೆ ತೀವ್ರ ನಿರಾಸೆಯಾಗಿದೆ.

ಈ ಬಾರಿಯ ಮೇಲ್ಮನೆ ಚುನಾವಣೆಯನ್ನು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರು ಪಕ್ಷಗಳು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದವು. ಹಾಲಿ ಸದಸ್ಯ ಬೆಮೆಲ್ ಕಾಂತರಾಜು ಪಕ್ಷ ತೊರೆದು ಕೈಹಿಡಿದ ಪರಿಣಾಮ ಪರಿಷತ್ ಸ್ಥಾನ ಉಳಿಸಿಕೊಳ್ಳಲು ಹಾಗೂ ಲೋಕಸಭೆ ಸೋಲಿನ ಸೇಡು ತೀರಿಸಿಕೊಳ್ಳಲು ಜೆಡಿಎಸ್ ವರಿಷ್ಠರೇ ಚುನಾವಣೆ ಅಖಾಡಕ್ಕೆ ಧುಮುಕಿದ್ದರು. ಮಾಜಿ ಶಾಸಕ ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಅವರನ್ನು ಸೋಲಿಸಲು ಪಣತೊಟ್ಟಿದ್ದ ದೇವೇಗೌಡರ ‘ನನ್ನ ಸೋಲಿನ ಸೇಡು ತೀರಿಸಿಕೊಳ್ಳಿ’ ಎಂಬ ಕೂಗು ಅರಣ್ಯರೋದನವಾಯಿತು. ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಬಲಹೊಂದಿದ್ದರೂ ಒಬ್ಬೊಬ್ಬರೆ ದಳಪತಿಗಳು ರಾಜಕೀಯವಾಗಿ ತಮ್ಮ ದಾರಿ ನೋಡಿಕೊಳ್ಳುತ್ತಿರುವ ಜತೆಗೆ ಪರಿಷತ್‌ನಲ್ಲಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ 3ನೇ ಸ್ಥಾನಕ್ಕೆ ದೂಡಲ್ಪಡುವುದರೊಂದಿಗೆ ಜೆಡಿಎಸ್ ಭದ್ರಕೋಟೆ ಸಂಪೂರ್ಣವಾಗಿ ನೆಲಸಮವಾದಂತಾಗಿದೆ.

ಕೈಒಗ್ಗಟ್ಟು, ಗೆಲುವಿನ ಗುಟ್ಟು : ರಾಜಣ್ಣ ಸೇರಿ ನಾಲ್ವರು ಶಾಸಕರು, ಸಂಸದರು ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗಲೂ ಪಕ್ಷದೊಳಗಿನ ಒಳ ಏಟಿಗೆ ಮಕಾಡೆ ಮಲಗಿದ್ದ ರಾಜೇಂದ್ರಗೆ ಈ ಬಾರಿ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಪಕ್ಷದ ಮುಖಂಡರು ಸಾಮೂಹಿಕ ಹೋರಾಟ ನಡೆಸಿ, ಒಗ್ಗಟ್ಟು ಪ್ರದರ್ಶಿಸಿದ ಫಲ ಪಕ್ಷ ಗೆಲುವಿನ ಲಯಕ್ಕೆ ಮರಳಿದೆ. ರಾಜೇಂದ್ರ ಗೆಲುವು ಸೊರಗಿ ಹೋಗಿದ್ದ ಕೈಗೆ ಶಕ್ತಿ ತುಂಬಿದೆಯಲ್ಲದೆ, ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ 2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಾಲಿಗೆ ದಿಕ್ಸೂಚಿ ಎನಿಸಿದೆ.

ಒಳ ಏಟಿಗೆ ಬಿಜೆಪಿ ಪ್ರತಿಷ್ಠೆಗೆ ಪೆಟ್ಟು : ಈ ಬಾರಿ ಪರಿಷತ್‌ನಲ್ಲಿ ಕಮಲ ಅರಳಿಸುವ ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಶತಾಯಗತಾಯ ಹೋರಾಟಕ್ಕೆ ಪಕ್ಷ ಮುಖಂಡರ ಒಳ ಏಟು ದೊಡ್ಡ ಪೆಟ್ಟುಕೊಟ್ಟಿದೆ. ಹಣದ ಹೊಳೆ ಹರಿಸಿದ್ದ ಎನ್.ಲೋಕೇಶ್ ಪಕ್ಷದೊಳಗಿನ ಒಣಪ್ರತಿಷ್ಠೆಗೆ ಬೆಲೆ ತೆತ್ತಿದ್ದಾರೆ. ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿಗೆ ಗೆಲುವಿನ ಶ್ರೇಯ ಸಿಗದಂತೆ ತಡೆಯಲು ಕೆಲ ಮುಖಂಡರು ನಡೆಸಿದ ಹುನ್ನಾರ ಭವಿಷ್ಯದಲ್ಲಿ ದೊಡ್ಡ ಬೆಲೆಯನ್ನು ತೆರುವಂತೆ ಮಾಡಲಿದೆ. ಇನ್ನು ಸಂಸದ ಜಿ.ಎಸ್.ಬಸವರಾಜು ಅವರು ರಾಜಣ್ಣ ಪುತ್ರಗೆ ‘ಸಹಕಾರ’ ನೀಡುವ ಮೂಲಕ ಲೋಕಸಭೆ ಚುನಾವಣೆ ಋಣ ತೀರಿಸಿದ್ದಾರೆಂಬ ಮಾತುಗಳು ರಾಜಕೀಯವಲಯದಲ್ಲಿ ಕೇಳಿಬರುತ್ತಿವೆ. ಗೆಲುವಿಗೆ ನಾನಾ ಅಪ್ಪಂದಿರು ಇದ್ದರೆ, ಸೋಲು ಅನಾಥ ಎನಿಸಲಿದೆ.

ದೇವೇಗೌಡರಿಗೆ ಮುಖಭಂಗ  :  ಹಾಸನ, ಮಂಡ್ಯ ನಂತರ ತುಮಕೂರು ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ. ವರಿಷ್ಠರ ವಿರುದ್ಧ ಅಸಮಾಧಾನಗೊಂಡಿರುವ ಈ ಕೋಟೆಯಲ್ಲಿನ ದಳಪತಿಗಳು ಒಬ್ಬೊಬ್ಬರಾಗಿ ಪಕ್ಷಾಂತರ ಮಾಡುತ್ತಿದ್ದು ಜೆಡಿಎಸ್ ನೆಲ ಅಲಗಾಡುವಂತಾಗಿದೆ. ಈ ಮಧ್ಯೆ ಲೋಕಸಭೆ ಸೋಲಿನ ಸೇಡು ತೀರಿಸಿಕೊಳ್ಳಲು ವಾಲ್ಮೀಕಿ ಸಮುದಾಯದ ಅನಿಲ್ ಕುಮಾರ್ ಅವರನ್ನು ಕಣಕ್ಕಿಳಿಸಿ ರಾಜಣ್ಣ ಅವರನ್ನು ರಾಜಕೀಯವಾಗಿ ಮುಗಿಸಲು ವ್ಯೆಹ ರಚಿಸಿದ್ದ ದೇವೇಗೌಡರಿಗೆ ಪರಿಷತ್ ಫಲಿತಾಂಶ ತೀವ್ರ ಮುಖಭಂಗ ಉಂಟುಮಾಡಿದೆ. 2023, 2024ರಲ್ಲಿ ತುಮಕೂರಿನಲ್ಲೇ ಇದ್ದು ನನ್ನ ಶಕ್ತಿ ತೋರಿಸುವೆ ಎಂದು ತೊಡೆತಟ್ಟಿದ್ದ ದೊಡ್ಡಗೌಡರಿಗೆ ಜಿಲ್ಲೆಯ ಬಾಗಿಲು ಮುಚ್ಚಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net