

ಮಂಗಳೂರು: ವಿವಿಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ನೀಡುವ 2022ರ ಸಾಲಿನ ನಾರಾಯಣ ಗುರು ಸಂಶೋಧನಾ ಪ್ರಶಸ್ತಿಗೆ ರಾಜಶ್ರೀ ಟಿ.ರೈ ಪೆರ್ಲ ಆಯ್ಕೆಯಾಗಿದ್ದಾರೆ.
ಕಾಸರಗೋಡಿನ ಕಾಟುಕುಕ್ಕೆ ಪೆರ್ಲ ನಿವಾಸಿಯಾಗಿರುವ ಇವರು ತುಳುವಿನಲ್ಲಿ ಪಣಿಯಾರ, ಬಜಿಲಜ್ಜೆ, ಕೊಂಬು, ಚೌಕಿ ಎಂಬ ನಾಲ್ಕು ಕಾದಂಬರಿಗಳು, ಚವಲೊ ಎನ್ನುವ ಕಥಾ ಸಂಕಲನ, ರಡ್ಡ ಕವುಲೆ ಎನ್ನುವ ತುಳು ಅಂಕಣ ಬರಹಗಳ ಸಂಕಲನ ಮತ್ತು ಮಮಿನದೊ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ನಾಟಿ ಔಷಧ ಪರಂಪರೆ ಬಗ್ಗೆ ಕಲ್ಪತರು, ತುಳುನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿ ರಚಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ತುಳು, ಕನ್ನಡದ ಸಾಹಿತ್ಯ ಸೇವೆಗಾಗಿ ಕೇರಳ ಸರ್ಕಾರದ ರಾಜ್ಯೋದಯ ಜಿಲ್ಲಾಡಳಿತ ಗೌರವ, ಚೌಕಿ ಕಾದಂಬರಿಗಾಗಿ ಎಸ್.ಯು. ಪಣಿಯಾಡಿ ಪ್ರಶಸ್ತಿ, ತುಳುನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿ ದೊರೆತಿವೆ. ಇವರ ‘ಮಿನ್ನ’ ಕತೆ ಮಂಗಳೂರು ವಿವಿಯ ತುಳು ಎಂಎಗೆ ಪಠ್ಯವಾಗಿದೆ. ಸಂಶೋಧನಾ ಪ್ರಶಸ್ತಿ 10 ಸಾವಿರ ರೂ.ನಗದು ಒಳಗೊಂಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.