

ರಾಯಚೂರು: ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ರಾಜಶೇಖರ ರಾಮಸ್ವಾಮಿ ಆರ್‌ಡಿಎ ಕಚೇರಿಯಲ್ಲಿ ಶನಿವಾರ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಶೇಖರ ರಾಮಸ್ವಾಮಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಮತ್ತು ಜಿಲ್ಲೆಯ ಪಕ್ಷದ ನಾಯಕರು ನನ್ನ ಸೇವೆಯನ್ನು ಗುರುತಿಸಿ ಜವಾಬ್ದಾರಿಯನ್ನು ನೀಡಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
ನಗರದ ಅಭಿವೃದ್ಧಿ, ಸೌಂದರ್ಯೀಕರಣ, ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಹೊಸ ಬಡಾವಣೆಗಳ ಅಭಿವೃದ್ಧಿ, ಪ್ರಾಕಾರದಿಂದ ಹೊಸ ಬಡಾವಣೆಗೆ ನಿರ್ಮಾಣದ ಜತೆಗೆ ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ, ನಗರಸಭೆ ಸದಸ್ಯ ಬಸವರಾಜ ಪಾಟೀಲ್ ದರೂರ, ಪಕ್ಷದ ಮುಖಂಡರಾದ ಅಬ್ದುಲ್ ಕರೀಂ, ಅಸ್ಲಂ ಪಾಷಾ, ಡಾ.ರಜಾಕ್ ಉಸ್ತಾದ್, ಭೀಮನಗೌಡ ಇಟಗಿ, ಡಿ.ಕೆ.ಮುರಳಿ ಯಾದವ, ಕೆ.ಇ.ಕುಮಾರ, ರಾಮಕೃಷ್ಣ ನಾಯಕ ಉಪಸ್ಥಿತರಿದ್ದರು.