ರಾಜಾಸೀಟು ಇಂದು ಆಕರ್ಷಣೀಯ ಸ್ಥಳವಾಗಿದೆ

3adarshkdga2
Published on

ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಗರದ ರಾಜಾಸೀಟು ಉದ್ಯಾನದಲ್ಲಿ ನಿರ್ಮಾಣವಾದ ಸಾಹಸ ಕ್ರೀಡೆಯನ್ನು ಶಾಸಕ ಕೆ.ಜಿ.ಬೋಪಯ್ಯ ಶುಕ್ರವಾರ ವೀಕ್ಷಿಸಿದರು.


ನಂತರ ಮಾತನಾಡಿದ ಅವರು, ರಾಜಸೀಟು ಇಂದು ಆಕರ್ಷಣೀಯ ಸ್ಥಳವಾಗಿದೆ. ತೋಟಗಾರಿಕೆ ಮತ್ತು ಜಿಲ್ಲಾಡಳಿತದಿಂದ ಬೇರೆ ಬೇರೆ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೊಂದು ವಿನೂತನ ಕಾರ್ಯಕ್ರಮವಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಸಾಹಸ ಕ್ರೀಡೆಗೆ ಚಾಲನೆ ನೀಡಲಾಗಿದೆ ಎಂದರು.


ಮಾ.೧೮ ರಂದು ಮಾನ್ಯ ಮುಖ್ಯಮಂತ್ರಿರವರು ಗ್ರೇಟರ್ ರಾಜಸೀಟು ಉದ್ಯಾನ ಉದ್ಘಾಟಿಸಲಿದ್ದಾರೆ. ರಾಜಾಸೀಟು ಒಳ್ಳೆಯ ಪ್ರೇಕ್ಷಣೀಯ ಸ್ಥಳವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಾಹಸ ಕ್ರೀಡೆಗೆ ಸಂಬಂಧಿಸಿದಂತೆ ಕೊಡಗಿನ ಅನೇಕ ಭಾಗಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.


ಈಗಾಗಲೇ ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿದ್ದು, ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಹಸ ಕ್ರೀಡೆಗಳಂತಹ ಅಭಿವೃದ್ಧಿ ಯೋಜನೆಗಳು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂದು ಹೇಳಿದರು.


ಬಳಿಕ ನಗರದ ರಾಜಸೀಟು ಉದ್ಯಾನವನದಲ್ಲಿ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರ್ಮಾಣವಾದ ಸಾಹಸ ಕ್ರೀಡಾ ವಿಭಾಗವನ್ನು ಮಡಿಕೇರಿ ಶಾಸಕರು ಉದ್ಘಾಟಿಸಿದರು.


ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ನಾಯಕ್, ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್, ಕೊಡಗು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net