ಕರೊನಾ ಸೋಂಕಿತರಿಗೆ ನರಕಸದೃಶವಾಗಿರುವ ರಾಜರಾಜೇಶ್ವರಿ ಆಸ್ಪತ್ರೆ ಬದಲಾಯಿಸಿ

06-11-rama-zp
Published on

ರಾಮನಗರ: ಕೋವಿಡ್ ರೋಗಿಗಳ ಪಾಲಿಗೆ ಬೆಂಗಳೂರು ಕೆಂಗೇರಿ ಬಳಿಯಿರುವ ರಾಜರಾಜೇಶ್ವರಿ ಆಸ್ಪತ್ರೆ ನರಕವಾಗಿದ್ದು, ಕೂಡಲೇ ಆಸ್ಪತ್ರೆ ಬದಲಾಯಿಸಿ ಎಂದು ಒಕ್ಕೊರಲಿನಿಂದ ಆಗ್ರಹಿಸಿದ ಪ್ರಸಂಗ ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಅಧ್ಯಕ್ಷ ಎಚ್.ಎನ್. ಅಶೋಕ್ ನೇತೃತ್ವದಲ್ಲಿ ನಡೆದ 18ನೇ ಸಭೆಯಲ್ಲಿ ಮೊದಲಿಗೆ ಸದಸ್ಯೆ ವೀಣಾಕುಮಾರ್ ವಿಷಯ ಪ್ರಸ್ತಾಪಿಸಿ, ರಾಜರಾಜೇಶ್ವರಿ ಆಸ್ಪತ್ರೆಗೆ ರೋಗಿಗಳಿಗೆ ನರಕ ಸದೃಶವಾಗಿದೆ. ಹೆಣಗಳ ಜತೆಗೆ ರಾತ್ರಿ ಪೂರ್ತಿ ಕಳೆಯುತ್ತಿದ್ದಾರೆ. ಇಂತಹ ಆಸ್ಪತ್ರೆ ಏತಕ್ಕೆ ಎಂದು ಪ್ರಶ್ನಿಸಿದರು. ಇದಕ್ಕೆ ಅಧ್ಯಕ್ಷ ಅಶೋಕ್ ದನಿಗೂಡಿಸಿದರು.

ಕರೊನಾ ವಿಚಾರದಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ, ಜನರಿಗೆ ನರಕ ತಪ್ಪಿಲ್ಲ, ಇದರಿಂದ ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಈ ಬಗ್ಗೆ ಆಸ್ಪತ್ರೆಯವರನ್ನು ಕೇಳಿದರೆ, ನಮ್ಮಲ್ಲಿಗೆ ಬಂದವರಿಗೆ ಎಷ್ಟು ಸಾಧ್ಯವೊ ಅಷ್ಟು ಚಿಕಿತ್ಸೆ ಕೊಡುತ್ತೇವೆ ಎನ್ನುತ್ತಾರೆ. ಹಾಗಾದರೆ ಹಣ ಎಲ್ಲಿ ಹೋಯ್ತು? ಈ ಬಗ್ಗೆ ವರದಿ ಕೊಡಿ ಎಂದು ಮಾಗಡಿ ಶಾಸಕ ಮಂಜುನಾಥ್ ಆಗ್ರಹಿಸಿದರು. ಇದರ ಜತೆಗೆ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಲೂಟಿ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕೋರು ಯಾರು. ಅಲ್ಲದೆ, ಈ ಆಸ್ಪತ್ರೆಯನ್ನು ಅಡಾಪ್ಟ್ ಮಾಡಿಕೊಳ್ಳಲಾಗಿದೆ, ಆದರೆ ಈವರೆಗೂ ಹಣ ಕೊಟ್ಟಿಲ್ಲ ಎನ್ನುತ್ತಾರೆ. ಹಣ ಕೊಡಿಸಬೇಕಾದ ಜವಾಬ್ದಾರಿ ಯಾರದ್ದು ಎಂದು ಮಂಜುನಾಥ್ ಪ್ರಶ್ನಿಸಿದರು.

ಸದಸ್ಯ ಎಸ್.ಗಂಗಾಧರ್ ಮಾತನಾಡಿ, ಖಂಡಿತವಾಗಿ ರಾಜರಾಜೇಶ್ವರಿ ಆಸ್ಪತ್ರೆ ಬೇಡ. ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದರು. ಇದಕ್ಕೆ ಇತರ ಸದಸ್ಯರೂ ಸಹಮತ ವ್ಯಕ್ತಪಡಿಸಿದರು.

ಈ ವೇಳೆ ಸಭೆಗೆ ಮಾಹಿತಿ ನೀಡಿದ ಡಿಎಚ್​ಒ ಡಾ. ಬಿ.ಎಸ್. ನಿರಂಜನ್, ನಮ್ಮ ಜಿಲ್ಲೆಯಲ್ಲಿ ಯಾವುದೇ ಮೆಡಿಕಲ್ ಕಾಲೇಜು ಇಲ್ಲ, ಅನಿವಾರ್ಯವಾಗಿ ಬೇರೊಂದು ಆಸ್ಪತ್ರೆ ಮೇಲೆ ಅವಲಂಬಿತವಾಗಬೇಕಿದೆ ಎಂದರು.

ಸಿಇಒ ಇಕ್ರಂ ಮಾತನಾಡಿ, ಅನಿವಾರ್ಯವಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಅವಲಂಬಿತವಾಗಿದ್ದೇವೆ. ಇಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಆದರೆ ಇನ್ನು ಕೆಲವೇ ತಿಂಗಳಲ್ಲಿ 250 ಹಾಸಿಗೆ ಆಸ್ಪತ್ರೆ ಆರಂಭಗೊಳ್ಳಲಿದ್ದು ಇದರಿಂದ ಹೊರೆ ಕಡಿಮೆ ಆಗಲಿದೆ ಎಂದು ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net