

ಮಡಿಕೇರಿ:
ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವ ಮೇ 6 ರಂದು ವಿವಿಧ ಪೂಜಾ ಕೈಂಕರ್ಯಗಳೊAದಿಗೆ ನಡೆಯಲಿದೆ ಎಂದು ದೇವಾಲಯದ ಟ್ರಸ್ಟಿ ಜಿ. ಕಿರಣ್ ಕುಮಾರ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ 6 ಗಂಟೆಗೆ ದೇವಾಲಯದಲ್ಲಿ ಧ್ವಜಾರೋಹಣದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. 6.30 ಗಂಟೆಗೆ ಗಣಪತಿ ಹೋಮ, 7.30ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥ ಸ್ನಾನ ನಡೆಯಲಿದೆ. ಬೆಳಿಗ್ಗೆ 9.20ಕ್ಕೆ ಕಳಶ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾರತಿ ನಡೆಯಲಿದೆ. 11.45ಕ್ಕೆ ದೇವಿಯ ರಥೋತ್ಸವ ದೇವಾಲಯದ ಆವರಣದ ಸುತ್ತ ಸಾಗಲಿದೆ. ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮ ಅರ್ಚನೆ ಮತ್ತು ಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅನ್ನದಾನ, 12.30ಕ್ಕೆ ತಾಯಿಯ ದರ್ಶನ, ಸಂಜೆ 6 ಗಂಟೆಗೆ ದೇವಾಲಯದಲ್ಲಿ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರ ಏರ್ಪಡಿಸಲಾಗಿದೆ. ರಾತ್ರಿ 9 ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇವಾಯದ ಮತ್ತೋರ್ವ ಟ್ರಸ್ಟಿ ಹೆಚ್. ಸಚಿನ್ ವಾಸುದೇವ್ ಮಾತನಾಡಿ, ರಥ ಎಳೆಯಲು ಪುರುಷರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಜಾತ್ರೆಗಿಂತ ಎಂಟು ದಿನಗಳ ಮೊದಲು ವ್ರತಪಾಲನೆ ಮಾಡಬೇಕು. ಅಲ್ಲದೆ ಆ ದಿನ ದೇವಾಲಯದಲ್ಲಿ ತೀರ್ಥಸ್ನಾನ ಮಾಡಿ ಬಿಳಿಪಂಚೆ ಹಾಗೂ ಕೆಂಪು ಮೇಲು ಹೊದಿಕೆ ಧರಿಸಿದವರಿಗೆ ಮಾತ್ರ ರಥ ಎಳೆಯಲು ಅವಕಾಶ ನೀಡಲಾಗುವುದು.
ರಥ ಎಳೆಯುವ ಸಂದರ್ಭ 14 ವರ್ಷದೊಳಗಿನ ಹೆಣ್ಣು ಮಕ್ಕಳು ಕಳಶ ಹೊತ್ತು ರಥದೊಂದಿಗೆ ತೆರಳುವುದು ಇಲ್ಲಿನ ವಿಶೇಷವಾಗಿದೆ. ಸಂಜೆ 6 ಗಂಟೆಯಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಧರ್ಮದರ್ಶಿಗಳಾದ ಗೋವಿಂದ ಸ್ವಾಮಿ ಮಾತನಾಡಿ, ರಥೋತ್ಸವದಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್, ಶಾಸಕ ಡಾ.ಮಂತರ್ ಗೌಡ ಪಾಲ್ಗೊಳ್ಳಲಿದ್ದಾರೆ. ಕೊಡಗು ಸೇರಿದಂತೆ ಹೊರ ಜಿಲ್ಲೆಯಿಂದ ಸುಮಾರು 5 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ವಾರ್ಷಿಕೋತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದೆ. ದೂರದಿಂದ ಬರುವ ಭಕ್ತಾಧಿಗಳಿಗೆ ತಂಗಲು ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಉಕ್ಕುಡದಿಂದ ದೇವಾಲಯದವರಗಿನ ರಸ್ತೆ ಅಸಮರ್ಪಕವಾಗಿದ್ದು, ಇಲ್ಲಿಯವರೆಗೆ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಅನುಕೂಲಕ್ಕಾಗಿ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸರಿಪಡಿಸಿಕೊಳ್ಳಲಾಗುತ್ತಿತ್ತು. ಇದೇ ಮಾರ್ಗದಲ್ಲಿ ಕಾರಾಗೃಹವು ಇರುವುದರಿಂದ ಸರ್ಕಾರ ಗಮನ ಹರಿಸಿ ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಾಡಿದರು.
ಭಕ್ತರಾದ ಚುಮ್ಮಿ ದೇವಯ್ಯ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಡಿ. ದಿಶಾಂತ್ ಇದ್ದರು.