

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಗುತ್ತದೆ. ಸಾರ್ವಜನಿಕವಾಗಿ ಭಕ್ತಿಯಿಂದ ನಡೆಯುವ ಗಣೇಶ ಹಬ್ಬಕ್ಕೆ ಎಲ್ಲ ರೀತಿಯಿಂದ ಸರ್ಕಾರವು ಸಹಕಾರ ನೀಡಬೇಕೆಂದು ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿ ಸಂಘಗಳ ಒಕ್ಕೂಟ ಮನವಿ ಮಾಡಿದೆ.
ಈ ಕುರಿತ ಮನವಿಯನ್ನು ಪೊಲೀಸ್ ಆಯುಕ್ತರು, ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಒಕ್ಕೂಟದ ಉಪಾಧ್ಯಕ್ಷ ಶಿವಾನಂದ ಮುತ್ತಣ್ಣವರ, ಮಹಾರಾಷ್ಟ್ರ ಮುಂಬೈ ಮಾದರಿಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತದೆ. 11 ದಿನಗಳ ಕಾಲ ಸಂಭ್ರಮ ಮನೆ ಮಾಡುತ್ತದೆ. ಈಗಾಗಲೇ ತಯಾರಿ ಭರ್ಜರಿಯಾಗಿ ನಡೆದಿದೆ. ಶಾಂತಿ, ಸುವ್ಯವಸ್ಥಿತವಾಗಿಯೇ ಎಲ್ಲರೂ ಹಬ್ಬದಾಚರಣೆ ಮಾಡುತ್ತಾರೆ.
ಆದರೆ, ಕೆಲ ನಿಯಮಾವಳಿಗಳನ್ನು ವಿಧಿಸಿ ಹಬ್ಬದ ಸಡಗರವನ್ನು ಕುಂದಿಸಲಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ರಾತ್ರಿ 10ರ ನಂತರ ಧ್ವನಿವರ್ಧಕ ಬಳಗೆ ನಿಷೇಧಿಸಿರುವುದರಿಂದ ಹಬ್ಬದ ವಾತಾವರಣ ಕಳೆಗುಂದುತ್ತಿದೆ ಎಂದು ತಿಳಿಸಿದ್ದಾರೆ.
ಅವಳಿನಗರ ಮಾತ್ರವಲ್ಲ, ಧಾರವಾಡ ಜಿಲ್ಲೆ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಜನರು ನೋಡಲು ಬರುತ್ತಾರೆ. ಅವರಿಗೆಲ್ಲ ನಿರಾಶೆಯಾಗುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸಿ ಸಂಭ್ರಮದಿಂದ ಗಣೇಶೋತ್ಸವ ಆಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.