ರಾಜಕಾಲುವೆಯಲ್ಲಿ ಚರಂಡಿ ತ್ಯಾಜ್ಯ

charandi new
Published on

ಭರತ್ ಶೆಟ್ಟಿಗಾರ್ ಮಂಗಳೂರು

ಗ್ರಾಮಾಂತರ ಪ್ರದೇಶದಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ತೋಡುಗಳಲ್ಲಿ ನೀರಿನ ಹರಿವು ನಿಲ್ಲುತ್ತದೆ. ಆದರೆ ಮಂಗಳೂರು ನಗರದಲ್ಲಿರುವ ಮಳೆ ನೀರು ಹರಿಯುವ ತೋಡುಗಳು ಬೇಸಿಗೆಯಲ್ಲೂ ನೀರಿನ ಹರಿವಿನಿಂದ ಕೂಡಿರುವುದನ್ನು ಕಾಣಬಹುದು.

ಇದರರ್ಥ ನಗರದಲ್ಲಿ ಸಾಕಷ್ಟು ನೀರಿನ ಹರಿವಿದೆ ಎಂದಲ್ಲ. ತೋಡಿನಲ್ಲಿ ಹರಿಯುತ್ತಿರುವುದು ಕೊಳಚೆ ನೀರು. ಮನೆಗಳು, ಹೋಟೆಲ್, ವಸತಿ ಸಮುಚ್ಚಯಗಳಿಂದ ತ್ಯಾಜ್ಯ ನೀರು ಈ ತೋಡು ಸೇರುತ್ತದೆ. ವೆಟ್‌ವೆಲ್, ಎಸ್‌ಟಿಪಿಗಳಿಂದಲೂ ಸಂಸ್ಕರಿಸದೆ ನೇರವಾಗಿ ಹೊರಬಿಡಲಾಗುವ ಒಳಚರಂಡಿ ನೀರು ರಾಜ ಕಾಲುವೆಗಳಲ್ಲಿ ಹರಿಯುತ್ತಿದ್ದು, ಇವುಗಳ ಜಿಡ್ಡುಗಳು ಈಗಾಗಲೇ ತೋಡಿನಲ್ಲಿ ತುಂಬಿರುವ ಹೂಳಿನೊಂದಿಗೆ ಸೇರಿ ಅಪಾರ ಪ್ರಮಾಣದಲ್ಲಿ ಸಂಗ್ರಹಗೊಂಡು ನೆರೆಗೆ ಕಾರಣವಾಗುತ್ತಿದೆ.

ತೋಡು-ರಾಜಕಾಲುವೆಗಳಲ್ಲಿ ಹರಿಯುತ್ತಿರುವುದು ಶೇ.75ರಷ್ಟು ಒಳಚರಂಡಿ ತ್ಯಾಜ್ಯವೇ ಆಗಿದೆ. ಹಾಗಾಗಿ ರಾಜಕಾಲುವೆ ಹರಿಯುವ ಸ್ಥಳದಲ್ಲೆಲ್ಲ ಅಸಹ್ಯ ವಾಸನೆ. ಈ ತೋಡುಗಳಲ್ಲಿ ಹುಲುಸಾಗಿ ಹುಲ್ಲು-ಪೊದೆಗಳು ಬೆಳೆದಿರುವುದೇ ತ್ಯಾಜ್ಯ ನೀರು ಹರಿಯುತ್ತಿದೆ ಎನ್ನುವುದಕ್ಕೆ ಸಾಕ್ಷಿ. ತೋಡುಗಳಲ್ಲಿ ಈಗ ತುಂಬಿರುವ ಹೂಳು ಸಂಪೂರ್ಣ ತೆಗೆದು, ಬಳಿಕ ಒಳಚರಂಡಿ ತ್ಯಾಜ್ಯ ಕಾಲುವೆಗಳಲ್ಲಿ ಹರಿಯದಂತೆ ತಡೆಯಬೇಕು. ಇದರಿಂದ ನೆರೆ ಬರದಂತೆಯೂ ತಡೆಯಲು ಸಾಧ್ಯವಿದೆ. ಈಗ ಇರುವ ಹೂಳನ್ನು ಗೊಬ್ಬರವಾಗಿ ಬಳಸಲು ಅವಕಾಶವಿದೆ ಎನ್ನುತ್ತಾರೆ ಹೋರಾಟಗಾರ ಸುರೇಶ್ ಉಡುಪ.

ದಂಬೆಲ್ ಅಣೆಕಟ್ಟು ಬಳಿ ನೈಜ ದರ್ಶನ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ ದಂಬೆಲ್‌ನಲ್ಲಿ ಹಲವು ವರ್ಷಗಳ ಹಿಂದೆ ಸಮುದ್ರದಿಂದ ನದಿಯ ಮೂಲಕ ಬರುವ ಉಪ್ಪು ನೀರು ರಾಜಕಾಲುವೆ ಪ್ರವೇಶಿಸಬಾರದು ಎಂದು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಪ್ರಸ್ತುತ ಈ ಕಿಂಡಿ ಅಣೆಕಟ್ಟು ಬಂಗ್ರಕೂಳೂರು ಮತ್ತು ದಂಬೆಲ್ ನಡುವಿನ ಸಂಪರ್ಕ ಸೇತು ಮಾತ್ರವೇ ಆಗಿದೆ. ಕೊಟ್ಟಾರ ಚೌಕಿ ಭಾಗದಲ್ಲಿ ರಾಜಕಾಲುವೆಯಲ್ಲಿ ಹರಿಯುವ ತ್ಯಾಜ್ಯ ನೀರು ಇಲ್ಲಿ ಬಂದು ಸಂಗ್ರಹವಾಗುತ್ತದೆ. ಅಣೆಕಟ್ಟಿನ 5 ಗೇಟ್‌ಗಳನ್ನು ತೆರೆದು ನೀರು ಹೊರಕ್ಕೆ ಬಿಡಲಾಗುತ್ತಿದ್ದರೂ, ನದಿಯಲ್ಲಿ ‘ಇಳಿತ’ದ ಅವಧಿಯಲ್ಲಿ ಹೊರಕ್ಕೆ ಹೋಗುವ ನೀರು ‘ಉಬ್ಬರ’ದ ಸಮಯದಲ್ಲಿ ಮತ್ತೆ ಒಳಕ್ಕೆ ಬರುತ್ತದೆ. ಇಲ್ಲಿ ಸಂಗ್ರಹವಾಗಿರುವ ಹೂಳನ್ನು ಗಮನಿಸಿದರೆ ಚರಂಡಿ ನೀರಿನ ಮಿಶ್ರಣವಿರುವುದು ಅರಿವಾಗುತ್ತದೆ.

ಪವರ್ ಬ್ಯಾಕ್‌ಅಪ್ ಇಲ್ಲದೆ ಸಮಸ್ಯೆ ಎಲ್ಲ ಎಸ್‌ಟಿಪಿ-ವೆಟ್‌ವೆಲ್‌ಗಳಿಗೆ ನಿರಂತರ 24 ಗಂಟೆ ಎಕ್ಸ್‌ಪ್ರೆಸ್ ಸ್ಪೀಡರ್ ಲೈನ್‌ನಲ್ಲಿ ವಿದ್ಯುತ್ ನೀಡಬೇಕು ಎಂಬುದು ಮೆಸ್ಕಾಂಗೆ ನೀಡಲಾಗಿರುವ ಸೂಚನೆ. ಆದರೆ ಮೆಸ್ಕಾಂ ಸ್ಪೀಡರ್ ಲೈನ್‌ನಿಂದ ವಿದ್ಯುತ್ ಕಳ್ಳತನ ಆಗುತ್ತದೆ ಎಂದು ಗೃಹೋಪಯೋಗಿ ವಿದ್ಯುತ್ ಲೈನ್ ಮೂಲಕ ಪವರ್ ಸಪ್ಲೈ ಮಾಡುತ್ತಿದೆ. ಪವರ್ ಕಟ್ ಸಂದರ್ಭ ಸರಿಯಾದ ಪವರ್ ಬ್ಯಾಕ್‌ಅಪ್ ಇಲ್ಲದೆ ತ್ಯಾಜ್ಯ ನೀರು ನೇರವಾಗಿ ತೋಡು ಸೇರುತ್ತಿದೆ. ತೋಡಿನಲ್ಲಿ ಹೂಳು ರೂಪದಲ್ಲಿ ಸಂಗ್ರಹಗೊಂಡು ನೆರೆಗೂ ಕಾರಣವಾಗುತ್ತಿದೆ. ಆದ್ದರಿಂದ ಗೊತ್ತಿದ್ದೋ-ಗೊತ್ತಿಲ್ಲದೆಯೋ ನೆರೆಗೆ ಕಾರಣವಾಗುತ್ತಿದೆ ಎನ್ನುವುದು ಆರೋಪ.

ಒಳಚರಂಡಿ ಸಂಸ್ಕರಣಾ ಕೇಂದ್ರಗಳಿಂದ ನೇರವಾಗಿ ಕೊಳಚೆ ನೀರು ಮಳೆ ನೀರು ಹರಿಯುವ ತೋಡುಗಳ ಮೂಲಕ, ರಾಜಕಾಲುವೆ ಸೇರುತ್ತಿದೆ. ನಮ್ಮಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಮಹಾನಗರ ಪಾಲಿಕೆಯೇ ತೋಡುಗಳಿಗೆ ಬಿಡುತ್ತಿದೆ ಎನ್ನಬಹುದು. ನಗರದ ಯಾವುದೇ ಎಸ್‌ಟಿಪಿಯಲ್ಲಿ ಒಳಚರಂಡಿ ನೀರನ್ನು ಸರಿಯಾಗಿ ಸಂಸ್ಕರಿಸಲಾಗುತ್ತಿಲ್ಲ. ಎಲ್ಲವೂ ತೋಡುಗಳಿಗೆ ಸೇರುತ್ತಿದೆ. ಸುರೇಶ್ ಉಡುಪ ಹೋರಾಟಗಾರ ಒಳಚರಂಡಿ ನೀರನ್ನು ರಾಜಕಾಲುವೆಗೆ ಬಿಡಲು ಅವಕಾಶವಿಲ್ಲ. ಯಾವ ವೆಟ್‌ವೆಲ್, ಎಸ್‌ಟಿಪಿಗಳಿಂದ ಸಂಸ್ಕರಿಸದೆ ನೀರನ್ನು ಹೊರಕ್ಕೆ ಹೊರಕ್ಕೆ ಬಿಡಲಾಗುತ್ತದೆ ಎಂದು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net