ರಾಜಯೋಗಿಂದ್ರ ಶ್ರೀ ಅಸಮಾಧಾನ

24KTR-1-Web
ಕಲ್ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಡಿವಾಳ ರಾಜಯೋಗಿಂದ್ರ ಶ್ರೀ ಮಾತನಾಡಿದರು. ಪಂಚಾಕ್ಷರಿ ಶ್ರೀ, ಹಬೀಬ ಶಿಲೇದಾರ ಇತರರಿದ್ದರು.
Published on

ಚನ್ನಮ್ಮನ ಕಿತ್ತೂರ: ಆರ್‌ಸಿಯು ಬೇರೆಡೆ ಸ್ಥಾಪಿಸಲು ಸಾಧ್ಯವಿಲ್ಲ ಎಂಬ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರ ಹೇಳಿಕೆಗೆ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಶ್ರೀ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳೀಯ ಕಲ್ಮಠದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಒಂದೇ ಸ್ಥಳದಲ್ಲಿ ನೀರಾವರಿ ಯೋಜನೆ ಹಾಗೂ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

ಕಿತ್ತೂರಿಗೆ ಮೆರಗು:ಐತಿಹಾಸಿಕ ಚನ್ನಮ್ಮಾಜಿಯ ಕಿತ್ತೂರಿನಲ್ಲಿ ಆರ್‌ಸಿಯು ಸ್ಥಾಪಿಸಿದರೆ ವಿವಿಗೂ ಒಂದು ವಿಶೇಷ ಮೆರಗು ಬರುತ್ತದೆ. ಹೀಗಾಗಿ ನಾಡಿನ ಮಠಾಧೀಶರು,ಸಮಾಜ ಸೇವಕರು, ಅನೇಕ ಸಂಘಟನೆಗಳು ಪ್ರತಿಭಟಿಸಿ ಸರ್ಕಾರದ ಗಮನ ಸೆಳೆಯುತ್ತಿವೆ. ಆದರೂ ಸರ್ಕಾರ ಹಿರೇಬಾಗೇವಾಡಿಯಲ್ಲಿ ಈಗಾಗಲೇ ನೀರಾವರಿ ಯೋಜನೆ ಮಂಜೂರಾತಿ ದೊರೆತು ಕಾಮಗಾರಿ ಆರಂಭಿಸಿರುವ ಸ್ಥಳದಲ್ಲಿಯೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪಿಸಲು ಹೊರಟಿರುವುದು ಬೇಸರದ ವಿಚಾರ ಎಂದರು.

ಶಾಸಕರಾದ ಮಹಾಂತೇಶ ದೊಡ್ಡಗೌಡ ಅವರು ಸದ್ಯದಲ್ಲಿಯೇ ಜಿಲ್ಲೆಯ ಸಚಿವರು ಹಾಗೂ ಶಾಸಕರೊಂದಿಗೆ ಮುಖ್ಯಮಂತ್ರಿ ಬಳಿ ನಿಯೋಗದೊಂದಿಗೆ ತೆರಳಿ ನಮ್ಮ ಬೇಡಿಕೆ ಅವರ ಮುಂದೆ ಮಂಡಿಸೋಣ ಎಂದು ಹೇಳಿದ್ದಾಗಿ ಶ್ರೀಗಳು ತಿಳಿಸಿದರು. ಸಮಾಜ ಸೇವಕ ಹಬೀಬ್ ಶಿಲೇದಾರ ಮಾತನಾಡಿ, ಕಿತ್ತೂರಿನಲ್ಲಿ ಆರ್‌ಸಿಯು ಸ್ಥಾಪನೆ ಆಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಸರ್ಕಾರವು ವಿವಿಯನ್ನು ಕಿತ್ತೂರಿಗೆ ಸ್ಥಳಾಂತರಿಸಿ ಚನ್ನಮ್ಮಾಜಿಗೆ ಗೌರವ ಸಲ್ಲಿಸಬೇಕು ಎಂದರು. ನಿಚ್ಚಣಕಿಯ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಶ್ರೀ, ರಾಣಿ ಚನ್ನಮ್ಮ ನವಭಾರತ ಸೇನೆಯ ಉ.ಕ. ಪ್ರಧಾನ ಸಂಚಾಲಕ ಜಗದೀಶ ಕಡೋಲಿ, ಸಂತೋಷ ಲಕ್ಕುಂಡಿ, ಅಬ್ದುಲ್ ಮುಲ್ಲಾ, ಅದೃಶಪ್ಪ ತುರಮರಿ, ಮಕ್ಬುಲ್ ಸನದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net