ಟ್ರ್ಯಾಕ್ ಮ್ಯಾನ್ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ದುರಂತ

Cash award to tmc
Published on

ಕಾರವಾರ: ಟ್ರ್ಯಾಕ್ ಮ್ಯಾನ್ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆಯಿಂದ ಸಾವಿರಾರು ಜನರ ಜೀವ ಉಳಿದಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಕುಮಟಾ-ಹೊನ್ನಾವರ ನಡುವೆ ಹಳಿಗಳ ವೆಲ್ಡಿಂಗ್ ಬಿಟ್ಟಿತ್ತು. ರಾಜಧಾನಿ ಎಕ್ಸ್ಪ್ರೆಸ್ ರೈಲು ಹಳಿ ತಪ್ಪುವ ಸಾಧ್ಯತೆ ಇತ್ತು. ಆದರೆ, ಟ್ರಾಕ್ ಮ್ಯಾನ್(ಟಿಎಸ್‌ಎಂ) ಒಬ್ಬರು ಸುಮಾರು ಅರ್ಧ ಕಿಮೀ ದೂರ ಹಳಿಯಲ್ಲಿ  ಓಡಿ, ರೈಲು ನಿಲ್ಲಿಸಿ ಆಗುವ ಅಪಾಯ ತಪ್ಪಿಸಿದ್ದಾರೆ.
ಬೆಳಗಿನ ಜಾವ ಕರ್ತವ್ಯದಲ್ಲಿದ್ದ ಟಿಎಂಸಿ ಮಹಾದೇವ ನಾಯ್ಕ  ಎಂಬುವವರು ಬ್ಯಾಟರಿ ಬಿಟ್ಟು ಹಳಿಗಳನ್ನು ಪರಿಶೀಲಿಸುತ್ತ ಓಡಾಟ ಮಾಡುವ ವೇಳೆ 4 ಗಂಟೆ 51 ನಿಮಿಷಕ್ಕೆ ಹಳಿಯಲ್ಲಿ ದೋಷ ಇರುವುದು ಕಂಡುಬಂದಿದೆ. ತಕ್ಷಣ ಅವರು ಕುಮಟಾ ನಿಲ್ದಾಣಕ್ಕೆ ಕರೆ ಮಾಡಿ ತಿಳಿಸಿದ್ದರು.
ತಿರುವನಂತಪುರಂನಿಂದ ನವದೆಹಲಿಯೆಡೆಗೆ ತೆರಳುವ ರಾಜಧಾನಿ ಎಕ್ಸ್ಪ್ರೆಸ್ 12431 ನಿಲ್ಲಿಸುವಂತೆ ತಿಳಿಸಿದ್ದ. ಆದರೆ, ರೈಲು ಆಗಲೇ 4.59 ಕ್ಕೆ ಹೊನ್ನಾವರ ನಿಲ್ದಾಣವನ್ನು ಬಿಟ್ಟಾಗಿತ್ತು. 8 ನಿಮಿಷದಲ್ಲಿ ರೈಲು ಹಳಿ ದೋಷವಿರುವ ಸ್ಥಳಕ್ಕೆ ತಲುಪಲಿತ್ತು. ಸ್ಟೇಷನ್ ಮಾಸ್ಟರ್ ಲೋಕೋ ಪೈಲಟ್‌ಗೆ ಕರೆ ಮಾಡಿದ್ದರು. ಜತೆಗೆ ನೀವೂ ತಕ್ಷಣ ತೆರಳಿ ರೈಲು ನಿಲ್ಲಿಸುವಂತೆ ಮಹಾದೇವ ಅವರಿಗೆ ಸೂಚಿಸಿದ್ದರು. ಟಿಎಸ್‌ಎಂ ಮಾದೇವ ನಾಯ್ಕ ತಕ್ಷಣ ಕಾರ್ಯಪ್ರವೃತ್ತರಾಗಿ ಹೊನ್ನಾವರ ಕಡೆಗೆ ಹಳಿಯಲ್ಲಿ ಓಡಲಾರಂಭಿಸಿದ್ದರು. ಐದು ನಿಮಿಷದಲ್ಲಿ  ವೆಲ್ಡಿಂಗ್ ಬಿಟ್ಟ ಸ್ಥಳದಿಂದ ಸುಮಾರು ಅರ್ಧ ಕಿಮೀ ಓಡಿ, ಸೂಚನೆ ಕೊಟ್ಟು ಮಾರ್ಗದ ನಡುವೆಯೇ ರೈಲು ನಿಲ್ಲಿಸಿದ್ದರು. ನಂತರ ತಂತರ ತಂತ್ರಜ್ಞರು ಆಗಮಿಸಿ ವೆಲ್ಡಿಂಗ್ ಮಾಡಿ, ಹಳಿ ದುರಸ್ತಿ ಮಾಡಿದ ನಂತರವೇ ರೈಲು ಕಾರವಾರದೆಡೆಗೆ ಪ್ರಯಾಣ ಬೆಳೆಸಿದೆ.
 ಟಿಎಸ್ ಎಂ ಮಹಾದೇವ ನಾಯ್ಕ ಅವರ ಕರ್ತವ್ಯ ಪ್ರಜ್ಞೆಯನ್ನು ಪರಿಗಣಿಸಿ ಕೊಂಕಣ ರೈಲ್ವೆ ಸಿಎಂಡಿ ಸಂತೋಷ ಕುಮಾರ ಝಾ ಅವರು 15 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಕೊಂಕಣ ರೈಲ್ವೆ ಸೀನಿಯರ್ ಇಂಜಿನಿಯರ್ ಬಿ.ಎಸ್.ನಾಡಗೆ ಅವರು ಮುರ್ಡೇಶ್ವರ ಸಮೀಪ ಮಹಾದೇವ ನಾಯ್ಕ ಅವರನ್ನು ಸನ್ಮಾನಿಸಿ, ನಗದು ಬಹುಮಾಣ ನೀಡಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net