

ಮಂಡ್ಯ: ಜಿಲ್ಲೆಯ ರೈತರು ಮುಂಗಾರು ಬೆಳೆ ಬೆಳೆಯಲು ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನಿರಂತರ ನೀರು ಹರಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರದಲ್ಲಿ ರೈತ ಸಂಘ(ಮೂಲ ಸಂಘಟನೆ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾವೇರಿ ನೀರಾವರಿ ನಿಗಮದ ಎದುರು ಧರಣಿ ನಡೆಸಿದ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು, ಜಿಲ್ಲೆಯ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವ ಅವೈಜ್ಞಾನಿಕ ಕ್ರಮ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಎರಡು ವರ್ಷದಿಂದ ಭೀಕರ ಬರದ ಪರಿಸ್ಥಿತಿ ಪರಿಣಾಮ ರೈತರು ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಬರದಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರು ಸಂಪೂರ್ಣ ಭರ್ತಿಯಾಗಿರುವುದು ಸಂತಸ ತಂದಿದೆ. ಕನ್ನಂಬಾಡಿ ತುಂಬಿದ ಸಂದರ್ಭದಲ್ಲಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನಿರಂತರ ನೀರು ಹರಿಯುವಿಕೆ ವಾಡಿಕೆ ಪದ್ಧತಿ ಇತ್ತು. ಆದರೆ ಇದೀಗ ಜಲಾಶಯ ಭರ್ತಿಯಾಗಿದ್ದರೂ ಸಹ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲು ಮುಂದಾಗಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಟ್ಟು ಪದ್ಧತಿ ವಿಚಾರದಲ್ಲಿ ಜನಪ್ರತಿನಿಧಿಗಳು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿಲುವಿನಲ್ಲಿ ಸ್ವಷ್ಟತೆ ಇಲ್ಲದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ರೈತರಲ್ಲಿನ ಆತಂಕ ನಿವಾರಣೆಗೆ ನಾಲೆಗಳಿಗೆ ನಿರಂತರ ನೀರು ಹರಿಸುವ ನಿರ್ಧಾರ ಕೈಗೊಂಡು ನೀರು ಹರಿಸಬೇಕು. ಜಿಲ್ಲೆಯ ಕೆರೆ ಕಟ್ಟೆಗಳನ್ನ ಶೀಘ್ರ ತುಂಬಿಸಬೇಕು. ಕೆರೆ ಅಚ್ಚುಕಟ್ಟು ರೈತರಿಗೆ ಭತ್ತದ ಸಸಿ ಮಡಿಗೆ ಅವಕಾಶ ನೀಡಿ ಭತ್ತ ಬೆಳೆಯಲು ಅನುವು ಮಾಡಿಕೊಡಬೇಕು. ವಿಶ್ವೇಶ್ವರಯ್ಯ ನಾಲಾ ಕೊನೆಯ ಭಾಗದ ಮದ್ದೂರು, ಮಳವಳ್ಳಿ, ಕೆ.ಎಂ.ದೊಡ್ಡಿ, ಕೊಪ್ಪ ಭಾಗದ ನಾಲೆಗಳಿಗೆ ನೀರನ್ನು ಹರಿಸಿ ಮುಂಗಾರು ಬೆಳೆಗೆ ಅವಕಾಶ ಮಾಡಬೇಕು. ಮುಖ್ಯ ನಾಲೆಗಳಿಂದ ಉಪನಾಲೆಗಳಿಗೆ ನೀರು ಸರಬರಾಜು ಸಮರ್ಪಕವಾಗಿ ಹರಿಯದೆ ರೈತರ ಜಮೀನುಗಳಿಗೆ ನೀರು ದೊರಕುತ್ತಿಲ್ಲ. ಆದ್ದರಿಂದ ನಾಲೆಗಳಲ್ಲಿನ ಹೂಳು, ಗಿಡ ಗೆಂಟೆಗಳನ್ನು ಸ್ವಚ್ಛಗೊಳಿಸಬೇಕು. ಜಿಲ್ಲಾ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳಿಗೆ ನೀರಿನ ಕೊರತೆ ಉಂಟಾಗಿ ನಿರಂತರ ಕಬ್ಬು ಅರೆಯುವಿಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾರ್ಖಾನೆಗಳಿಗೆ ನೀರಿನ ಲಭ್ಯತೆ ಪೂರೈಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಎಸ್.ಮಂಜೇಶ್, ಬೋರಲಿಂಗೇಗೌಡ, ವೆಂಕಟೇಶ್ ಪಣ್ಣೆದೊಡ್ಡಿ, ಸೋ.ಸಿ.ಪ್ರಕಾಶ್, ಆರ್.ಕಾಂತಯ್ಯ, ಡಿ.ಎಸ್.ಚಂದ್ರಣ್ಣ, ಶಿವಲಿಂಗೇಗೌಡ, ಕಾಂತರಾಜು, ಪಿ.ಕೆ.ರಮೇಶ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಇತರರಿದ್ದರು.