

ಉಡುಪಿ-ಕಾಸರಗೊಡು ವಿದ್ಯುತ್ ಮಾರ್ಗ ಜಿಲ್ಲೆಯ ರೈತರ ಅಳಿವು ಉಳಿವಿನ ಪ್ರಶ್ನೆ. ಕೃಷಿ ಜಮೀನು ಉಳಿಸುವಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ, ಅವರು ಅದನ್ನು ಕಸದ ಬುಟ್ಟಿಗೆ ಎಸೆದು ಕಂಪನಿ ಏಜೆಂಟರಂತೆ ವರ್ತಿಸುತ್ತಿರುವುದು ಖಂಡನಾರ್ಹ ಎಂದು ಕರ್ನಾಟಕ ರೈತ ಸಂಘ ಹಸಿರು ಸೇನೆ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಜಮೀನುಗಳನ್ನು ಹಾಳು ಮಾಡುವ ಯೋಜನೆಯನ್ನು ತಕ್ಷಣ ಸ್ಥಗಿತ ಮಾಡಬೇಕು. ರೈತರ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಹುನ್ನಾರ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದರು.
ಇನ್ನಾದಲ್ಲಿ ಭತ್ತದ ಗದ್ದೆಯನ್ನು ಹಾಳುಗೆಡುವುದನ್ನು ವಿರೋಽಸಿ ತೀವ್ರ ಮಟ್ಟದ ಪ್ರತಿಭಟನೆಯನ್ನು ನಡೆಸಲಾಯಿತು. ಜಿಲ್ಲಾಧಿಕಾರಿಗಳ ವರ್ತನೆ ಸರಿಯಿಲ್ಲದ ಸಮಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಯೋಜನೆಯನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿರುವುದು ಉಭಯ ಜಿಲ್ಲೆಗಳಿಗೆ ಅನ್ವಯ. ಆದರೆ ಕಂಪನಿ ಕೆಲವು ದುರಹಂಕಾರಿ ಅಧಿಕಾರಿಗಳ ಸಹಕಾರ ಪಡೆದು ರಾತ್ರಿ ಹೊತ್ತು ಜಮೀನುಗಳಿಗೆ ನುಗ್ಗುತ್ತಿದೆ. ಹಸಿರು ಸೇನೆ ಒಗ್ಗೂಡಿಸಿ ಅಹಿಂಸಾತ್ಮಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ಇದು ಖಾಸಗಿ ಕಂಪನಿ ಯೋಜನೆ. ೨೦೧೫ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ರೈತರಿಗೆ ನೆಮ್ಮದಿಯಿಲ್ಲ. ಶೇ.೮೦ರಷ್ಟು ರೈತರ ಒಪ್ಪಿಗೆ ಇದ್ದರೆ ಮಾತ್ರ ಯೋಜನೆ ಮಾಡಬೇಕೆಂಬ ನಿಯಮವನ್ನು ಗಾಳಿಗೆ ತೂರಿ ಕೆಲಸ ನಿರ್ವಹಿಸಲಾಗುತ್ತಿದೆ. ರೈತರಿಗೆ ಬೇಡವಾದರೆ ಯೋಜನೆ ನಿಲ್ಲಿಸಲು ಸಚಿವರು ಸೂಚಿಸಿದ್ದಾರೆ ಎಂದರು.
ಕೋಶಾಧಿಕಾರಿ ಚಿತ್ತರಂಜನ್ ಎನ್.ಎಸ್.ಡಿ., ಕಾರ್ಯದರ್ಶಿ ಕೃಷ್ಣ ಪ್ರಸಾದ್, ಲಕ್ಷ್ಮೀನಾರಾಯಣ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಡಿಸಿ ನಿಲುವು ಖೇದಕರ
ಶೇ.೯೯ ಮಂದಿ ಯೋಜನೆಗೆ ಒಪ್ಪಿಗೆ ನೀಡಿಲ್ಲ, ಯೋಜನೆಗೆ ಪರ್ಯಾಯ ದಾರಿ ಹುಡುಕುವಂತೆ ಹೋರಾಟ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಸಭೆ ನಡೆಸಿ ಹಾಜರಾತಿ ಪುಸ್ತಕದಲ್ಲಿ ಸಹಿ ಪಡೆದು ರೈತರ ಒಪ್ಪಿಗೆ ಇದೆ ಎಂಬ ರೀತಿ ಬಿಂಬಿಸಿರುವುದು ಖೇದಕರ ಎಂದು ೪೦೦ ಕೆ.ವಿ.ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಹೇಳಿದರು.