

ಮಂಡ್ಯ: ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ, ಮೈಕ್ರೋ ಫೈನಾನ್ಸ್ ಹಾವಳಿ ಕಿರುಕುಳ ತಡೆಗಟ್ಟಲು ಆಗ್ರಹಿಸಿ ಜ.29ರಂದು ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ರಿಸರ್ವ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.
ಕೇಂದ್ರ ಸಕಾರ ಕಳೆದ ಮೂರು ವರ್ಷದಿಂದ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಲೇ ಬಂದಿದೆ. ಕಳೆದ ವರ್ಷ ರಾಜ್ಯಕ್ಕೆ 5,600 ಕೋಟಿ ರೂ ನೀಡಲಾಗಿದ್ದ ಸಾಲವನ್ನು ಪ್ರಸಕ್ತ ವರ್ಷ 2,340 ಕೋಟಿ ರೂ.ಗೆ ಇಳಿಸಿದೆ. ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಿದ್ದು, ಅವರ ಕಿರುಕುಳದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು ಹಾಗೂ ಇತರೆ ದುಡಿಯುವ ವರ್ಗ ಸಂಕಷ್ಟಕ್ಕೀಡಾಗಿದ್ದಾರೆ. ಇತ್ತೀಚೆಗೆ ರಾಮನಗರದಲ್ಲಿಯೂ ಮಹಿಳೆ ಆತ್ಮಹತ್ಯೆಗೆ ಶರಣಾದ ಪ್ರಕರಣ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೋರಾಪುರ ಶಂಕರೇಗೌಡ, ಲಿಂಗಪ್ಪಾಜಿ, ಅಣ್ಣಯ್ಯ, ವಿ.ಸಿ.ಉಮೇಶ್, ವಿಜಿಕುಮಾರ್, ಮಂಜು ಇತರರಿದ್ದರು.