

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಸ್ಪರ್ಧೆ ಮಾಡಲಿದ್ದು, ಅವರನ್ನು ಕಾಂಗ್ರೆಸ್ ಬೆಂಬಲಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಕೋರಿದರು.
ಚಳವಳಿಗಾರರೊಬ್ಬರಿಗೆ ಇಂಡಿಯಾ ಒಕ್ಕೂಟ ಒಂದು ಸ್ಥಾನವನ್ನು ಬಿಟ್ಟುಕೊಡುವುದು ಉತ್ತಮ ಬೆಳವಣಿಗೆಯಾಗುತ್ತದೆ. ಬಡಗಲಪುರ ನಾಗೇಂದ್ರ ಮೈಸೂರು ಜಿಲ್ಲೆಯವರಾಗಿ ವಿದ್ಯಾರ್ಥಿ ಜೀವನದಲ್ಲಿ ಜನಮುಖಿ ಚಳವಳಿಯಲ್ಲಿ ಗುರುತಿಸಿಕೊಂಡು ವೃತ್ತಿಯಲ್ಲಿ ವಕೀಲರಾಗಿಯೂ ಹೆಸರು ಗಳಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇವರನ್ನು ಕಾಂಗ್ರೆಸ್ ಬೆಂಬಲಿಸಿದ್ದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜಯ ಸಾಧ್ಯವಾಗಲಿದೆ. ಈ ಬೆಳವಣಿಗೆ ರಾಜ್ಯದಲ್ಲಿ ಹೊಸ ಮಾದರಿ ರಾಜಕಾರಣಕ್ಕೆ ನಾಂದಿಯಾಗುತ್ತದೆ. ಇತರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ವಿನಂತಿಸಿದರು.
ರೈತ, ದಲಿತ ಚಳವಳಿಯು ಸೇರಿದಂತೆ ಸಾಮಾಜಿಕ ಚಳವಳಿಗಳೆಲ್ಲವೂ ಸಂಘಟಿತವಾಗಿ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಕೆಲಸ ಮಾಡಲಾಯಿತು. ಇದರ ಫಲವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಗಿದೆ. ಲೋಕಸಭಾ ಚುನಾವಣೆಯಲ್ಲೂ ಚಳವಳಿಗಳು ಆ ಪ್ರಯತ್ನ ಮುಂದುವರಿಸುತ್ತವೆ ಎಂದರು.
ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ನಾಗನಹಳ್ಳಿ ವಿಜೇಂದ್ರ ಹಾಗೂ ನೇತ್ರಾವತಿ ಇದ್ದರು.