ಮಾ.24ರೊಳಗೆ ಡಿಕೆಶಿ ಕ್ಷಮೆಯಾಚನೆ ಮಾಡಲಿ: ರೈತ ಸಂಘ ಏಕೀಕರಣ ಸಮಿತಿಯ ಸದಸ್ಯ ಇಂಡುವಾಳು ಚಂದ್ರಶೇಖರ್ ಎಚ್ಚರಿಕೆ

Raitha Sangh Integration Committee press conference Mandya
Published on

ಮಂಡ್ಯ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಡ್ಯ ಜಿಲ್ಲೆಯ ಜನರನ್ನು ಛತ್ರಿಗಳು ಎಂದು ಹೇಳಿಕೆ ನೀಡಿರುವುದು ನೋವುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಮಾ.24ರೊಳಗೆ ಡಿಕೆಶಿ ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕೆಂದು ರಾಜ್ಯ ರೈತ ಸಂಘ ಏಕೀಕರಣ ಸಮಿತಿ ಸದಸ್ಯ ಇಂಡುವಾಳು ಚಂದ್ರಶೇಖರ್ ಒತ್ತಾಯಿಸಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಜಿಲ್ಲೆಯ ಜನರು ಚಳವಳಿಯಲ್ಲಿ ಭಾಗವಹಿಸುವುದರ ಜತೆಗೆ ಪ್ರಮುಖ ಹೋರಾಟ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ಛಾಪು ಮೂಡಿಸಿದ್ದಾರೆ. ಜಿಲ್ಲೆಯ ಜನತೆಯ ಬಗ್ಗೆ ಬೇರೆ ಜಿಲ್ಲೆಯ ಜನಕ್ಕೂ ಗೌರವ ಇದೆ. ಇಂತಹ ಜಿಲ್ಲೆಯ ಜನಗಳನ್ನು ಛತ್ರಿಗಳು ಎಂದಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಬಗ್ಗೆ ಜಿಲ್ಲೆಯನ್ನು ಪ್ರತಿನಿಧಿಸುವ ಕಾಂಗ್ರೆಸ್ ಎಂಎಲ್‌ಎ ಮತ್ತು ಎಂಎಲ್‌ಸಿ ಒಂದು ಮಾತನ್ನು ಆಡದಿರುವುದು ವಿಪರ್ಯಾಸ. ಶಿವಕುಮಾರ್ ಅವರಿಗೆ ಈ ಬಗ್ಗೆ ತಿಳಿಸಿ ಸ್ಪಷ್ಟನೆ ನೀಡುವ ಕೆಲಸವನ್ನು ಸಹ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದೇ ಛತ್ರಿ ಬುದ್ಧಿ ಎಂಬುದು ಸಾಬೀತಾಗಿದೆ. ನಿಗದಿತ ಅವಧಿಯೊಳಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜಿಲ್ಲೆಗೆ ಬಂದರೆ ಕಪ್ಪು ಬಾವುಟ ಪ್ರದರ್ಶಿಸಿ ಬಹಿಷ್ಕಾರ ಹಾಕಲಾಗುವುದು ಎಂದು ಎಚ್ಚರಿಸಿದರು.

24ರೊಳಗೆ ಕ್ಷಮಾಪಣೆ ಕೇಳದಿದ್ದರೆ ಮಾ.25ರಂದು ಬೆಳಗ್ಗೆ 10ಗಂಟೆಗೆ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಜೆ.ಸಿ. ವೃತ್ತದವರೆಗೆ ಛತ್ರಿಗಳನ್ನು ಹಿಡಿದು ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು, ರೈತರು, ಸಂಘ-ಸಂಸ್ಥೆಗಳ ಮುಖಂಡರು ಛತ್ರಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು

ಮತ್ತೊರ್ವ ಸದಸ್ಯ ಶಂಭೂನಹಳ್ಳಿ ಸುರೇಶ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಪೆನ್ನು ಪೇಪರ್ ಕೊಡಿ ಎಂದು ಕೇಳಿದ್ದಕ್ಕೆ ಜಿಲ್ಲೆಯ ಜನ ಆರು ಜನ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಅದಕ್ಕಾಗಿ ಈ ರೀತಿಯ ಗೇಲಿ ಮಾಡಿದ್ದಾರೆಯೇ?. ಇವರ ಚರಿತ್ರೆ ಏನು ಎಂಬುದು ರಾಜ್ಯದ ಜನಕ್ಕೆ ಗೊತ್ತಿದೆ. ಇವರಿಗೆ ಬುದ್ಧಿ ಕಲಿಸುವ ಕಾಲ ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಮುಖಂಡರಾದ ಶಿವಳ್ಳಿ ಚಂದ್ರು, ಬೋರಲಿಂಗೇಗೌಡ ಪಣಕನಹಳ್ಳಿ, ಹಲ್ಲೆಗೆರೆ ಶಿವರಾಂ, ಹೊಳಲು ಸಂತೋಷ್, ಇಂಡುವಾಳು ಸಿದ್ದೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net