ತಹಸೀಲ್ದಾರ್​ ವರ್ಗಾವಣೆಗೆ ರೈತ ಸಂಘ ಒತ್ತಾಯ

ತಾಲೂಕಿನ ತಹಸೀಲ್ದಾರ್​ ಮನೀಷಾ ಅವರ ವರ್ಗಾವಣೆಗೆ ಒತ್ತಾಯಿಸಿ ರೈತ ಸಂ, ಹಸಿರುಸೇನೆ ಹಾಗೂ ಸಿಪಿಎಂ ಕಾರ್ಯಕರ್ತರು ಗುಡಿಬಂಡೆ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಬಲರಾಮಪ್ಪ, ಜಿಲ್ಲಾ ಸಂಚಾಲಕ ಕೆ.ಎನ್​.ಸೋಮಶೇಖರ್​, ಕಾರ್ಯದರ್ಶಿ ನಂದೀಶ ಇತರರು ಇದ್ದರು.
Tahsilder Vargavanege Raita Sangha Ottaya
Published on


ರೈತರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿ ವಿರುದ್ಧದ ಅಕ್ರಮಗಳ ತನಿಖೆಗೆ ಆಗ್ರಹಿಸಿದ ಪ್ರತಿಭಟನಾಕಾರರು

ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
ತಾಲೂಕಿನಲ್ಲಿರುವ ತಹಸೀಲ್ದಾರ್​ ಅವರನ್ನು ಕೂಡಲೇ ವರ್ಗಾವಣೆ ಮಾಡಿ, ಅವರ ಅಧಿಕಾರ ಅವಧಿಯಲ್ಲಿ ಮಾಡಿರುವ ಖಾತೆಗಳ ಕುರಿತಂತೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘ, ಹಸಿರು ಸೇನೆ ಮತ್ತು ಸಿಪಿಎಂ ಕಾರ್ಯಕರ್ತರು ಗುರುವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎಚ್​.ಪಿ.ರಾಮನಾಥ್​ ಮಾತನಾಡಿ, ಗುಡಿಬಂಡೆ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅನೇಕ ಭಾರಿ ರೈತರು ಭ್ರಷ್ಟಾಚಾರದ ಬಗ್ಗೆ ತಹಸೀಲ್ದಾರ್​ ಎನ್​.ಮನೀಷಾ ಅವರ ಗಮನಕ್ಕೆ ತಂದರೂ ತಡೆಯುವಲ್ಲಿ ಕ್ರಮವಹಿಸಲಿಲ್ಲ. ಕೇವಲ ರಿಯಲ್​ ಎಸ್ಟೇಟ್​ ಉದ್ಯಮಿಗಳ ಕೆಲಸ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ರೈತರು ಸಮಸ್ಯೆಗಳನ್ನು ಕೇಳುತ್ತಿಲ್ಲ, ಪಿಟಿಸಿಎಲ್​ ಕಾಯ್ದೆಗೆ ಒಳಪಡುವ ಜಮೀನುಗಳನ್ನು ಮಾರಾಟ ಮಾಡಿದ್ದರೂ ಸಹ ಅದನ್ನು ತಡೆಯದೇ ಭೂ ಮಾಫಿಯರವರಿಗೆ ಅನುಕೂಲವಾಗುವಂತೆ ಖಾತೆಗಳನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ವರ್ಗಾವಣೆ ಮಾಡಿ ಅವರ ಅಧಿಕಾರವಧಿಯಲ್ಲಿ ಆದ ಸಾಗುವಳಿ ಚೀಟಿ, ಕೆಲ ಕಡತಗಳನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖ ಬೇಡಿಕೆಗಳು
ಕಚೇರಿಗೆ ಅಧಿಕಾರಿಗಳು ತಡವಾಗಿ ಆಗಮಿಸುತ್ತಿದ್ದು, ಸಿಬ್ಬಂದಿಗೆ ಬಯೋಮೆಟ್ರಿಕ್​ ಅಳವಡಿಸಬೇಕು, ಅಭಿಲೇಖಾಲಯದಲ್ಲಿ ದಾಖಲೆಗಳನ್ನು ನೀಡುವ ವಿಚಾರದಲ್ಲಿ ಬಾರಿ ವಿಳಂಬ ಧೋರಣೆ ಅನುಸರಿಸುತ್ತಿದ್ದು, ನಿಗದಿತ ಸಮಯದೊಳಗೆ ರೈತರಿಗೆ ದಾಖಲೆಗಳನ್ನು ನೀಡಬೇಕು. ರೈತರ ಅರ್ಜಿಗಳನ್ನು ಸಕಾಲಕ್ಕೆ ಪರಿಹರಿಸಬೇಕು. ಬಂದಾರ್ಲಹಳ್ಳಿ ಸರ್ವೇ ನಂ.117 ರ ಜಮೀನು ಸರ್ಕಾರದ್ದಾಗಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ್ದು ಇದನ್ನು ತನಿಖೆ ಮಾಡಿ ಸರ್ಕಾರಿ ಭೂಮಿ ವಶಪಡಿಸಿಕೊಳ್ಳಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಕಚೇರಿಯಲ್ಲಿ ಲಭ್ಯವಿಲ್ಲದೇ ಖಾಸಗಿ ಕಟ್ಟಡಗಳಲ್ಲಿ ಕಚೇರಿಗಳನ್ನು ಮಾಡಿಕೊಂಡಿರುವುದರಿಂದ ರೈತರ ಸಮಸ್ಯೆಗೆ ಸ್ಪಂದಿಸಲಾಗುತ್ತಿಲ್ಲ. ಎಲ್ಲಾ ಅಧಿಕಾರಿಗಳು ತಾಲೂಕು ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಬಲರಾಮಪ್ಪ, ಜಿಲ್ಲಾ ಸಂಚಾಲಕ ಕೆ.ಎನ್​.ಸೋಮಶೇಖರ್​, ಕಾರ್ಯದರ್ಶಿ ನಂದೀಶ, ಸಹ ಕಾರ್ಯದರ್ಶಿ ರಾಜಪ್ಪ, ಗೌರವಾಧ್ಯಕ್ಷ ವೆಂಕಟರೋಣಪ್ಪ, ತಾಲೂಕು ಮಹಿಳಾ ಸಂಚಾಲಕಿ ಗಾಯತ್ರಿ, ಉಪಾಧ್ಯಕ್ಷ ರವೀಂದ್ರರೆಡ್ಡಿ, ಮುಖಂಡರಾದ ವೆಂಕಟರೆಡ್ಡಿ, ವೆಂಕಟೇಶಪ್ಪ, ರಾಮರೆಡ್ಡಿ, ದೇವರಾಜ್​ ಹಾಗೂ ಸಿಪಿಎಂ ಕಾರ್ಯಕರ್ತರು ಇದ್ದರು.


ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಅವರ ಬೇಡಿಕೆಗಳನ್ನು ಹೇಳಿದರೆ ತ್ವರಿತಗತಿಯಲ್ಲಿ ಈಡೇರಿಸಲಾಗುತ್ತದೆ. ಆದರೆ ಅವರು ಆರೋಪಗಳನ್ನು ಮಾಡುವುದು ಸರಿಯಲ್ಲ. ಈಗಾಗಲೇ ಸಾಗುವಳಿ ಚೀಟಿ, ವೃದ್ಧಾಪ್ಯವೇತನ ಸೇರಿ ಇತರೆ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಯೋಜನೆಗಳನ್ನು ನೀಡಲಾಗಿದೆ. ಸರ್ಕಾರಿ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಆರೋಪ ಮಾಡುತ್ತಿದ್ದು ಅದರ ಬಗ್ಗೆ ಪರಿಶೀಲನೆ ಮಾಡುತ್ತೇನೆ.

ಎನ್​.ಮನೀಷಾ, ತಹಸೀಲ್ದಾರ್​


ರೈತ ಸಂಘದಿಂದ ನೀಡಿರುವ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದು ತಾವು ತಿಳಿಸಿರುವ ಕಾಲಾವಕಾಶದೊಳಗೆ ಎಲ್ಲ ಬೇಡಿಕೆಗಳನ್ನು ಈಡೇರಿಸಲು ತಿಳಿಸಲಾಗುವುದು. ಗಳಿಗೆ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತಾವು ತಿಳಿಸಿರುವ ಕಾಲವಕಾಶದೊಳಗೆ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ತಿಳಿಸಲಾಗುತ್ತದೆ.

ನಾಗೇಂದ್ರ, ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿ


ತಾಲೂಕಿನ ತಹಸೀಲ್ದಾರ್​ ಮನೀಷಾ ಅವರ ವರ್ಗಾವಣೆಗೆ ಒತ್ತಾಯಿಸಿ ರೈತ ಸಂ, ಹಸಿರುಸೇನೆ ಹಾಗೂ ಸಿಪಿಎಂ ಕಾರ್ಯಕರ್ತರು ಗುಡಿಬಂಡೆ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಬಲರಾಮಪ್ಪ, ಜಿಲ್ಲಾ ಸಂಚಾಲಕ ಕೆ.ಎನ್​.ಸೋಮಶೇಖರ್​, ಕಾರ್ಯದರ್ಶಿ ನಂದೀಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net