ಟ್ರಯಲ್ ಬ್ಲಾಸ್ಟ್‌ಗೆ ಯಾವಾಗಲೂ ವಿರೋಧ: ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಸ್ಪಷ್ಟನೆ

Raitha Sanga press conference mandya
Published on

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಗೆ ಗಣಿಗಾರಿಕೆಯಿಂದಾಗುವ ತೊಂದರೆ ಬಗ್ಗೆ ಖಚಿತಪಡಿಸಲು ಟ್ರಯಲ್ ಬ್ಲಾಸ್ಟ್ ನಡೆಸಿದರೆ, ಅದನ್ನು ವಿರೋಧ ವ್ಯಕ್ತಪಡಿಸಿ ಗೋಬ್ಯಾಕ್ ಚಳವಳಿ ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಸ್ಪಷ್ಟಪಡಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಕೆಆರ್‌ಎಸ್ ಅಣೆಕಟ್ಟೆಯ ವ್ಯಾಪ್ತಿಯ 20 ಕಿ.ಮೀ ಸುತ್ತ ಗಣಿಗಾರಿಕೆ ನಡೆಸದಂತೆ ಹೈಕೋರ್ಟ್ ಸೂಚನೆ ನೀಡಿದೆ. ಇದರ ಪಾಲನೆಗೆ ನಾವೆಲ್ಲರೂ ಕಾಳಜಿ ತೋರಬೇಕು. ಈ ಹಿಂದೆ ಟ್ರಯಲ್ ಬ್ಲಾಸ್ಟ್‌ಗೆ ಆಗಮಿಸಿದ ತಜ್ಞರ ತಂಡಕ್ಕೆ ವಿರೋಧ ವ್ಯಕ್ತಪಡಿಸಿ ಗೋ ಬ್ಯಾಕ್ ಚಳವಳಿ ಮಾಡಿದ್ದೇವೆ. ಇದರಲ್ಲಿ ಸ್ವಹಿತಾಸಕ್ತಿಗಿಂತ ಅಣೆಕಟ್ಟೆ ರಕ್ಷಣೆ ಮುಖ್ಯವಾಗಿದ್ದು, ರೈತ ಸಂಘದ ವಿರೋಧ ವ್ಯಕ್ತವಾಗಲಿದೆ. ರಾಜ್ಯಸರ್ಕಾರ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಟ್ರಯಲ್ ಬ್ಲಾಸ್ಟ್‌ಗೆ ನಿರ್ಧರಿಸುವುದು ನಮ್ಮ ಗಮನಕ್ಕೆ ಬಂದಿಲ್ಲ. ಹಾಗೊಮ್ಮೆ ಶಾಸಕರು ಬ್ಲಾಸ್ಟ್‌ಗೆ ಒಲವು ತೋರಿದರೆ ನಮ್ಮ ವಿರೋಧ ಎದುರಿಸಬೇಕಾಗುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ರೈತರಿಗೆ ನೆರವಾಗುವ ಹಕ್ಕೊತ್ತಾಯಗಳ ಕುರಿತು ಕೃಷಿಯಲ್ಲಿ ’ಕರ್ನಾಟಕ ಮಾದರಿ’ ಎಂಬ ಕೈಪಿಡಿ ಸಿದ್ಧಪಡಿಸಿ ಸಿಎಂಗೂ ಸಲ್ಲಿಸಲಾಗಿದೆ. ಪ್ರಮುಖವಾಗಿ ತಕ್ಷಣದ ಹಕ್ಕೊತ್ತಾಯವಾಗಿ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ತಗಲುವ ವೆಚ್ಚವನ್ನು ರೈತರೇ ಭರಿಸಬೇಕೆನ್ನುವ ನಿಯಮ ಬದಲಾಯಿಸಬೇಕು. ಸೌರಶಕ್ತಿ ವಿದ್ಯುತ್ ಸಂಪರ್ಕಕ್ಕೆ ಆದ್ಯತೆ ನೀಡಬೇಕು. ಪ್ರೊ.ಎಂ.ಡಿ.ಎನ್ ಅವರ ಕರೆಯ ಮೇರೆಗೆ ನಡೆದಿದ್ದ ಕರ ನಿರಾಕರಣೆ ಚಳವಳಿ ಅಂಗವಾಗಿ ಹಲವರು ಮನೆ ವಿದ್ಯುತ್ ಪಾವತಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಕಿ ಮೊತ್ತವನ್ನು ಪೂರ್ಣ ಮನ್ನಾ ಮಾಡಬೇಕು. ತೋಟದ ಮನೆಯಲ್ಲಿ ಇರುವವರಿಗೆ ಗೃಹಬಳಕೆಗೆ ಅಗತ್ಯವಿರುವ ವಿದ್ಯುತ್ ಅನ್ನು ನಿರಂತರವಾಗಿ ಒದಗಿಸಬೇಕು. ಹದ್ದುಬಸ್ತು, ಪೋಡಿ ದುರಸ್ತಿ, ಸ್ಕೆಚ್, ಹೌಸಿಂಗ್ ಇ-ಸ್ವತ್ತು ನಕ್ಷೆ ವಿಧಿಸಿರುವ ವಿಪರೀತ ಶುಲ್ಕವನ್ನು ಇಳಿಕೆ ಮಾಡಬೇಕು ಸೇರಿದಂತೆ ಹಲವು ಅಂಶಗಳನ್ನು ಜಾರಿಗೊಳಿಸಲು ಒತ್ತಾಯಿಸಲಾಗಿದೆ ಎಂದು ಹೇಳಿದರು.

ಮುಖಂಡರಾದ ಲಿಂಗಪ್ಪಾಜಿ, ಬೊಮ್ಮೇಗೌಡ, ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net