ಟ್ರಯಲ್ ಬ್ಲಾಸ್ಟ್ ವಿರುದ್ಧ ಕಾನೂನು ಸಮರ: ನಿರ್ಣಯ ತೆಗೆದುಕೊಂಡ ರೈತ ಸಂಘ

Raitha Sanga Meeting mandya
Published on

ಮಂಡ್ಯ: ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಇರುವ ಅಪಾಯದ ಬಗ್ಗೆ ತಿಳಿಯಲು ಉಚ್ಛ ನ್ಯಾಯಾಲಯ ಟ್ರಯಲ್ ಬ್ಲಾಸ್ಟ್ ಆದೇಶ ನೀಡಿರುವುದನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಜತೆಗೆ ಟ್ರಯಲ್ ಬ್ಲಾಸ್ಟ್ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಲಾಗಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಚರ್ಚೆ ನಡೆಸಿ ಪ್ರಮುಖ ಎರಡು ನಿರ್ಣಯ ಕೈಗೊಳ್ಳಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ ಮಾತನಾಡಿ, ಹಿಂದಿನಿಂದಲೂ ರೈತ ಸಂಘ ಟ್ರಯಲ್ ಬ್ಲಾಸ್ಟ್ ವಿರೋಧಿಸುತ್ತಾ ಬಂದಿದೆ. ಕೊನೆ ಉಸಿರಿರುವವರೆಗೂ ಗಣಿಗಾರಿಕೆ ವಿರೋಧಿಸುವ ನಿಲುವಿಗೆ ರೈತ ಸಂಘ ಬದ್ಧವಾಗಿದೆ. ಟ್ರಯಲ್ ಬ್ಲಾಸ್ಟ್ ಅವಶ್ಯಕ ಎನ್ನುವುದಾದರೆ 20 ಕಿ.ಮೀ ವ್ಯಾಪ್ತಿ ಮೀರಿ ನಡೆಸಿಕೊಳ್ಳಲಿ. ಆದರೆ ಟ್ರಯಲ್ ಬ್ಲಾಸ್ಟ್ ತಡೆಯಲು ರಾಮನಗರ, ಮೈಸೂರು ಜಿಲ್ಲೆ ಸಂಘಟನೆಗಳೊಂದಿಗೆ ಮಾತನಾಡಿ ಕೆಆರ್‌ಎಸ್ ಉಳಿಸಲು ಮುಂದಾಗಲಾಗುವುದು. ಅವಶ್ಯವಿದ್ದರೆ ರಾಜ್ಯದ ಇತರೆ ಜಿಲ್ಲೆಗಳ ಜನರ ಸಹಕಾರವನ್ನು ಪಡೆದು ಹೋರಾಟ ಮುಂದುವರಿಸೋಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತ ಸಂಘದ ನಿಲುವೇ ನನ್ನ ನಿಲುವಾಗಿದೆ. 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಯ ಬದುಕಿಗಾಗಿ ಪರ್ಯಾಯ ಆಲೋಚನೆ ಮಾಡಬೇಕಿದೆ. ನ್ಯಾಯಾಂಗದ ಆದೇಶದ ವಿರುದ್ಧ ಕಾನೂನು ಹೋರಾಟ ಮುಂದುವರಿಸಬೇಕು. ಗಣಿಗಾರಿಕೆ ವಿರುದ್ಧ ತಾವು ಯಾವುದೇ ಹೋರಾಟಕ್ಕೆ ಸಿದ್ಧ. ನನ್ನ ಮೇಲೆ ಯಾವ ರಾಜಕೀಯ ಒತ್ತಡವು ಇಲ್ಲ. ಯಾವುದೇ ಆತಂಕ ಬೇಡ ಎಂದು ಸ್ಪಷ್ಟನೆ ನೀಡಿದರು.

ಸಿಪಿಐಎಂ ಮುಖಂಡ ಟಿ.ಎಲ್.ಕೃಷ್ಣೇಗೌಡ ಮಾತನಾಡಿ, ಹೈಕೋರ್ಟ್ ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಅದರಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ. ನ್ಯಾಯಾಲಯದ ವ್ಯಾಪ್ತಿಗೆ ಹೋದ ಮೇಲೆ ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕು. ಈ ಆದೇಶವನ್ನು ಬೀದಿ ಹೋರಾಟದಿಂದ ಹಿಮ್ಮೆಟ್ಟಿಸಲು ಅಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ವಿವಿಧ ಸಂಘಟನೆಯ ತಗ್ಗಳ್ಳಿ ಪ್ರಸನ್ನ, ವಿಜಯಕುಮಾರ್, ಎಣ್ಣೆಹೊಳೆಕೊಪ್ಪಲು ಮಂಜು, ಜಿ.ಮಲ್ಲಿಗೆರೆ ಅಣ್ಣಯ್ಯ, ಗುರುಪ್ರಸಾದ್ ಕೆರಗೋಡು, ಮಹದೇವು, ಕೆನ್ನಾಳು ನಾಗರಾಜು, ಶಂಕರ್, ಸಿ.ಕುಮಾರಿ, ರಘು, ದಯಾನಂದ್, ಗಾಣದಾಳು ನಾಗರಾಜು, ಲಿಂಗಪ್ಪಾಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net