

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಬೆಂಗಳೂರು ಗ್ರಾಮಾಂತರ ಜಿಲ್ಲಾ ರೈತ ಸಂಘಕ್ಕೆ ನೂತನ ಅಧ್ಯಕ್ಷರನ್ನಾಗಿ ಡಾ.ವಿನೋದ್‌ಕುಮಾರ್‌ಗೌಡ ಅವರನ್ನು ನಗರದ ಪ್ರವಾಸಿ ಮಂದಿರದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಹರಳಾಪುರ ಮಂಜೇಗೌಡ ಮಾತನಾಡಿ, ರೈತರ ವಿರೋಧ ಕಟ್ಟಿಕೊಂಡು ಯಾವುದೇ ಸರ್ಕಾರ ನಡೆಸಲು ಸಾಧ್ಯವಿಲ್ಲ. ಈಗಿನ ಸರ್ಕಾರ ನುಡಿದಂತೆ ನಡೆಯದೇ ಹೋದರೆ ಮತ್ತೆ ಹಿಂದಿನ ಸರ್ಕಾರಗಳ ರೀತಿ ಪಾಠ ಕಲಿಸಬೇಕಾಗುತ್ತದೆ. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ದುಸ್ಸಾಹಸ ಕೈಬಿಟ್ಟು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದರು.
ಸಂಘವು ರಾಜ್ಯದ ರೈತರ ಹಿತ ಕಾಪಾಡುವುದರಲ್ಲಿ ಶ್ರಮಿಸುತ್ತಿದ್ದು, ದೆಹಲಿಯಲ್ಲಿ ನಡೆದ ರೈತರ ಹೋರಾಟದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರೈತರ ವಿಧೇಯಕಗಳನ್ನು ವಾಪಸ್ ಪಡೆದರೂ, ರಾಜ್ಯ ಬಿಜೆಪಿ ವಾಪಸ್ ಪಡೆಯಲು ಹಿಂದೇಟು ಹಾಕಿತ್ತು. ಈಗಿನ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ವಿನೋದ್‌ಕುಮಾರ್‌ಗೌಡ ಮಾತನಾಡಿ, ಮೊದಲಿನಿಂದಲೂ ರೈತರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ಯಾವುದೇ ಒತ್ತಡಕ್ಕೂ ಮಣಿಯದೆ ಹೋರಾಟಕ್ಕೆ ಮುಂದಾಗುವ ಮೂಲಕ ಸ್ಥಾನಕ್ಕೆ ಗೌರವ ತರುವ ಕೆಲಸ ಮಾಡುತ್ತೇನೆ. ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತೇನೆ. ಆಳುವ ಸರ್ಕಾರಗಳು ಬಯಲು ಸೀಮೆ ಭಾಗದಲ್ಲಿ ಫಲವತ್ತಾದ ಕೃಷಿಯೋಗ್ಯ ಭೂಮಿಯನ್ನು ಕಸಿದು ಕೈಗಾರಿಕೆಗಳಿಗೆ ಕೊಡುವುದನ್ನು ನಿಲ್ಲಿಸಿ, ಬರಡು ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆ ನೀಡಲಿ. ಚನ್ನರಾಯಪಟ್ಟಣ ಭಾಗದ ರೈತರು ಭೂಮಿ ನೀಡುವುದಿಲ್ಲ ಎಂದರೂ ಸರ್ಕಾರ ಜಾಣ ಮೌನ ವಹಿಸಿರುವುದು ಸರಿಯಲ್ಲ ಎಂದರು.
ಸಂಘದ ಕಾರ್ಯಾಧ್ಯಕ್ಷ ಡಾ.ಎನ್.ಚಂದ್ರಶೇಖರ್, ಉಪಾಧ್ಯಕ್ಷ ಡಾ.ಮಂಜುನಾಥ್, ಗೌರವಾಧ್ಯಕ್ಷ ರಾಜಣ್ಣ, ಜಿಲ್ಲಾ ಉಪಾಧ್ಯಕ್ಷ ಎ.ಎಂ.ನಾರಾಯಣಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಕೋಶಾಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ರವಿಕುಮಾರ್, ಸಮಾಜ ಸೇವಕ ಎನ್.ಮುನಿರಾಜು ಎಸ್.ಆರ್ ತಾಲೂಕು ರೈತ ಸಂಘದ ಅಧ್ಯಕ್ಷ ಜಯಶಂಕರ್, ಆರ್.ಕೆ.ನಂಜೇಗೌಡ, ರಬ್ಬನಹಳ್ಳಿ ಕೆಂಪಣ್ಣ, ಅಶ್ವತ್ಥಪ್ಪ, ಶರಣಯ್ಯ ಹಿರೇಮಠ, ಕೃಷ್ಣಪ್ಪ, ಗಯಾಜ್‌ಪಾಷ, ನಾಸಿರ್, ಪೋಲನಹಳ್ಳಿ ಚೈತ್ರಾನಾಗರಾಜ್, ನೂರುಲ್ಲಾ, ನಾರಾಯಣಸ್ವಾಮಿ, ಹಾರೋಹಳ್ಳಿ ನಾರಾಯಣಸ್ವಾಮಿ ಇದ್ದರು.