ಮೈಸೂರಿನಲ್ಲಿ ರೈತ ದಸರಾದ ರಂಗು

Raitha dasara
Published on

ಮೈಸೂರು: ಆಧುನಿಕ ಕೃಷಿ ಪದ್ಧತಿಯಲ್ಲಿ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಬಳಕೆಯಿಂದಾಗಿ ಕೂಲಿ ಕಾರ್ಮಿಕರ ಸಮಸ್ಯೆ ಬಗೆಹರಿಸಿಕೊ ಳ್ಳುವುದರೊಂದಿಗೆ ಉತ್ತಮವಾದ ಫಸಲು ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವತ್ತ ನಮ್ಮ ರೈತರು ಮುಂದಾಗಬೇಕು ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ರೈತರಿಗೆ ಸಲಹೆ ನೀಡಿದರು.

ರೈತ ದಸರಾ ಉಪ ಸಮಿತಿ ವತಿಯಿಂದ ನಗರದ ಜೆ.ಕೆ.ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮವನ್ನು ಭತ್ತ ಕುಟ್ಟುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ರೈತರಿಗೆ ಅವಶ್ಯಕವಿರುವ ಸೌಲಭ್ಯ ಮತ್ತು ಮಾರ್ಗದರ್ಶನಗಳನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ ಎಂದರು.

ದೇಶದಲ್ಲಿ ದೊಡ್ಡ ಮಟ್ಟದಲ್ಲಿ ರೈತ ಸಮುದಾಯದವರಿದ್ದು, ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ರೈತ ದಸರಾ ಹಮ್ಮಿಕೊಳ್ಳು ವ ಮೂಲಕ ರೈತರಿಗೆ ಗೌರವ ಸಲ್ಲಿಸಲಾಗುತ್ತಿದೆ. ನಮ್ಮ ರೈತರಲ್ಲಿ ಕೆಲವರು ತಾವು ಸಂಗ್ರಹಿಸಿಟ್ಟುಕೊಂಡ ಹಳೇ ತಳಿಯ ಬೀಜಗಳನ್ನೇ ಬೆಳೆ ಬೆಳೆಯಲು ಮುಂದಾಗುತ್ತಾರೆ. ಸಂಗ್ರಹಿಸಲ್ಪಟ್ಟ ತಳಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿರುವಂತಹ ಮತ್ತು ಆಧುನಿಕ ಪದ್ಧತಿಯಿಂದ ಸಂಸ್ಕರಿಸಲ್ಪಟ್ಟ ತಳಿಗಳ ಬೇಸಾಯ ಮಾಡುವುದರಿಂದ ಉತ್ತಮ ಫಸಲನ್ನು ಬೆಳೆದು ಆರ್ಥಿಕವಾಗಿ ಅಭಿವೃದ್ಧಿಗೊಳ್ಳುವಂತೆ ಹಾಗೂ ತಂತ್ರಜ್ಞಾನದ ಮೂಲಕ ಸಮಗ್ರ ಕೃಷಿಯನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.

ಕಬ್ಬು ಕಟಾವು ಮಾಡುವ ಯಂತ್ರಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಇದ್ದು, ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಶೇ.50ರಷ್ಟು ಸಬ್ಸಿಡಿ ಆಧಾರದಲ್ಲಿ ಯಂತ್ರೋಪಕರಣ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಯಂತ್ರೋಪಕರಣಕ್ಕಾಗಿಯೇ ಒಂದು ಸಾವಿರಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಸರ್ಕಾರದಿಂದ ಮೀಸಲಿರಿಸಲಾಗಿದೆ. ಇದುವರೆಗೂ ಸುಮಾರು 334 ಫಲಾನುಭವಿಗಳು ಇದರ ಸೌಲಭ್ಯ ಪಡೆದುಕೊಂಡಿರುತ್ತಾರೆ. ಸರ್ಕಾರದ ಯೋಜನೆಗಳು ಅದರಲ್ಲೂ ರೈತರಿಗೆ ಅನುಕೂಲವಾಗುವಂತಹ ಸಬ್ಸಿಡಿ ಕುರಿತಾಗಿ ವಿಶ್ವವಿದ್ಯಾಲಯಗಳು ರೈತರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡುವ ಮೂಲಕ ಅರಿವು ಮೂಡಿಸಬೇಕು ಎಂದರು.

ಸಾಧಕ ರೈತರಿಗೆ ಸನ್ಮಾನ: ವರಕೋಡು ಗ್ರಾಮದ ಮುದ್ದರಾಮೇಗೌಡ ಮತ್ತು ಜಯಪುರ ಹಾರೋಹಳ್ಳಿಯ ಮಹೇಶ (ಕೃಷಿ), ಟಿ.ಕಾಟೂರಿನ ಮರಂಕಯ್ಯ ದೊಡ್ಡ ಕವಲಂದೆ ಹಳೇಪುರದ ಎಚ್.ಎಸ್.ಮಹದೇವಯ್ಯ (ತೋಟಗಾರಿಕೆ), ಬೆಟ್ಟದಪುರದ ರವಿ, ವರುಣ ಮೇಗಳಾಪುರದ ಮಂಜುಳ (ಪಶುಸಂಗೋಪನೆ) ಬಿಳಿಕೆರೆ ದಾಸನಪುರದ ಮಹೇಂದ್ರ, ಕೆ.ಆರ್. ನಗರ ಕಾಮೇನಹಳ್ಳಿಯ ಎನ್. ಶಿವರಾಮೇಗೌಡ (ರೇಷ್ಮೆ), ಕೊಡಗಳ್ಳಿಯ ದೀಪಿಕಾ (ಮೀನುಗಾರಿಕೆ) ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್, ಶಾಸಕ ಕೆ.ಹರೀಶ್ ಗೌಡ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ದಸರಾ ಉಪ ಸಮಿತಿ ವಿಶೇಷಾಧಿಕಾರಿ ಭೀಮಪ್ಪ ಕೆ. ಲಾಳಿ, ಕಾರ್ಯಾಧ್ಯಕ್ಷ ಕೆ.ಎಚ್.ರವಿ, ಅಧ್ಯಕ್ಷ ಕೆ.ಪಿ.ಯೋಗೇಶ್, ಉಪಾಧ್ಯಕ್ಷ ಹರೀಶ್ ಮೊಗಣ್ಣ, ಗೋವಿಂದ ಶೆಟ್ಟಿ, ಶ್ರೀನಿವಾಸ್, ರಘು, ಕೆ.ಎಸ್.ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net