

ಪುತ್ತೂರು: ಪಂಚಾಯಿತಿಯ ಅನುದಾನ ಬಳಸಿದ ಖಾಸಗಿ ರಸ್ತೆಗಳನ್ನು ಮುಚ್ಚಲು ಯಾರಿಗೂ ಅವಕಾಶವಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೈತರಿಗೆ ಸಾಧ್ಯವಾದಷ್ಟು ಸಹಾಯ ನೀಡಲಾಗುತ್ತಿದೆ. ಪಂಚಾಯಿತಿಯಲ್ಲಿ ಲಿಖಿತ ದಾಖಲೆಗಳು ಇಲ್ಲದೆ ವೈಯಕ್ತಿಕ ದಾಖಲೆಯನ್ನು ನೀಡುವುದಕ್ಕೆ ಆಕ್ಷೇಪ ನೀಡುವಂತಿಲ್ಲ ಎಂದು ಪಿಡಿಒ ನಾಗೇಶ್ ಎಂ. ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ.ಕ ಜಿಲ್ಲಾ ಪ್ರಧಾನ ಕಚೇರಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೃಷಿ ಜಮೀನಿನಲ್ಲಿ ಕೋಳಿ ಸಾಕಣೆ ಕಟ್ಟಡ ಮಾಡುವುದಕ್ಕೆ ಪಂಚಾಯಿತಿಯ ಪರವಾನಗಿಯಿಂದ ವಿನಾಯಿತಿ ನೀಡಲಾಗಿದೆ. ವಾಸದ ಮನೆಯಿಂದ ೨೦೦ ಮೀಟರ್ ದೂರದಲ್ಲಿ ನಿರ್ಮಾಣ ಮಾಡಬೇಕೆಂಬ ಷರತ್ತು ಹಾಕಲಾಗುತ್ತದೆ. ರಸ್ತೆಗೆ ಸರ್ಕಾರಿ ಅನುದಾನ ಬಳಕೆ ಸಂದರ್ಭ ಜಾಗದ ಮಾಲೀಕರಿಗೆ ಆಕ್ಷೇಪ ಸಲ್ಲಿಸಲು ಅವಕಾಶವಿದೆ. ಅನುದಾನ ಬಳಸಿದ ಬಳಿಕ ಅದು ಸಾರ್ವಜನಿಕ ಸೊತ್ತಾಗಿದ್ದು, ಮುಚ್ಚುವುದಕ್ಕೆ ಅವಕಾಶವಿಲ್ಲ. ಸಾರ್ವಜನಿಕರಿಗೆ ಸರ್ಕಾರಿ ದಾಖಲೆ ಪಡೆಯಲು ಸಾಕಷ್ಟು ಅವಕಾಶಗಳಿದ್ದು, ಗ್ರಾಮಸಭೆ ತನಕ ಕಾಯಬೇಕಿಲ್ಲ ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಯುಕೆಟಿಸಿಎಲ್ ವಿರೋಧಿ ಯೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿ ಈಶ್ವರ ಭಟ್, ರೈತ ಸಂಘದ ಕುಂಬ್ರ ವಲಯ ಅಧ್ಯಕ್ಷ ಕೆ.ಶೇಖರ ರೈ ಮತ್ತಿತರರು ಉಪಸ್ಥಿತರಿದ್ದರು.
ನಬಾರ್ಡ್ ನಿಯಮದ ಪ್ರಕಾರ ಐದು ಎಕರೆ ಜಮೀನಿನು ಹೊಂದಿದವರು ಸಣ್ಣ ರೈತರಾಗಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಗೆ ಬಂದಾಗ ಮಾತ್ರ ೩ ಎಕರೆ ನಿಗದಿ ಮಾಡಲಾಗಿದೆ. ಇದನ್ನು ಜನಪ್ರತಿನಿಽಗಳು ಒಂದು ಬಾರಿ ಐದು ಎಕರೆಗೆ ಏರಿಸಿ ಸುತ್ತೋಲೆ ಹೊರಡಿಸಿದ್ದು, ಈಗ ಮತ್ತೆ ಹಳೆಯ ಪದ್ದತಿಗೇ ಬಂದು, ರೈತರಿಗೆ ಸಮಸ್ಯೆಯಾಗುತ್ತಿದೆ.
| ಮನೋಹರ ಶೆಟ್ಟಿ ನಡಿಕಂಬಳಗುತ್ತು ರೈತ ಸಂಘ ರಾಜ್ಯ ಕಾರ್ಯದರ್ಶಿ