ರೈತರ ತೊಂದರೆಗೆ ಸ್ಪಂದಿಸದಿದ್ದಲ್ಲಿ ತೀವ್ರ ತರದ ಹೋರಾಟ - ಪ್ರತಿಭಟನೆಯಲ್ಲಿ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಹೇಳಿಕೆ

PTR_1 MAR_4
Published on

ಪುತ್ತೂರು: ಜಿಲ್ಲೆಯ ರೈತರ ಹಲವು ವರ್ಷಗಳ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ. ಕ. ಜಿಲ್ಲಾ ಸಮಿತಿಯಿಂದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡುಕಂಬಳಗುತ್ತು ಮಾತನಾಡಿ, ರೈತರು ಬಿಸಿಲಿನಲ್ಲಿ ನಿಂತು ಕೃಷಿ ಚಟುವಟಿಕೆ ನಡೆಸಿದರೆ, ಅಽಕಾರಿ ವರ್ಗ ಹವಾನಿಯಂತ್ರಿತ ಕೊಠಡಿಯಲ್ಲಿ ಕೂತು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ರೈತರ ಹಕ್ಕುಗಳನ್ನು ಕಸಿದುಕೊಳ್ಳುವ ಕಾರ್ಯ ನಡೆಯುತ್ತಿದೆ. ರೈತರಿಗೆ ತೊಂದರೆ ಆಗದಂತೆ ಅಽಕಾರಿಗಳು ಹಾಗೂ ಜನಪ್ರತಿನಿಽಗಳು ನಡೆದುಕೊಂಡರೆ ಉತ್ತಮ, ಇಲ್ಲದೇ ಹೋದರೆ, ತೀವ್ರ ತರದ ಹೋರಾಟ ನಡೆಸಬೇಕಾಗುತ್ತದೆ ಎಂದರು.

ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ಹಲವು ವರ್ಷಗಳಿಂದ ಬಾಕಿಯಿರುವ ಅಕ್ರಮ-ಸಕ್ರಮ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಕುಮ್ಕಿ ಹಕ್ಕು ಅನುಭವಿಸುತ್ತಿರುವವರಿಗೆ ಭೂಮಿ ಮಂಜೂರುಗೊಳಿಸಬೇಕು. ಹವಾಮಾನ ವೈಪರೀತ್ಯ ಹಾಗೂ ಪ್ರಾಕೃತಿಕ ವಿಕೋಪದಿಂದ ಶೇ.೭೫ ರೈತರು ನಷ್ಟ ಉಂಟಾಗಿದ್ದು ಪ್ರತಿ ಎಕರೆಗೆ ೧ಲಕ್ಷ ರೂ.ಪರಿಹಾರ ಘೋಷಿಸಬೇಕು. ಯಶಸ್ವಿನಿ ಯೋಜನೆಯನ್ನು ತಾಲೂಕಿನ ಎಲ್ಲ ಆಸ್ಪತ್ರೆಗಳಿಗೂ ಅನ್ವಯಿಸಬೇಕು. ಜಿಲ್ಲೆಯಲ್ಲಿ ಹಾದುಹೋಗುತ್ತಿರುವ ೪೦೦ಕೆ.ವಿ ವಿದ್ಯುತ್ ಪ್ರಸರಣದ ಮಾರ್ಗವನ್ನು ಸ್ಥಗಿತಗೊಳಿಸಿ ಪರ್ಯಾಯ ಮಾರ್ಗದ ಮೂಲಕ ನಡೆಸಬೇಕು ಎಂದು ಹೇಳಿದರು.

ಸವಣೂರು ವಲಯದ ಗೌರವಾಧ್ಯಕ್ಷ ಶಿವಣ್ಣ ಇಡ್ಯಾಡಿ, ೪೦೦ಕೆವಿ ವಿದ್ಯುತ್ ಮಾರ್ಗ ವಿರೋಧ ಹೋರಾಟ ಸಮಿತಿ ಅಧ್ಯಕ್ಷ ರಾಜೀವ್ ಗೌಡ, ರೈತ ಸಂಘ ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ನೆಲಜಲ ಹೋರಾಟ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಪಾಳಿಗೆ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ, ಈಶ್ವರ ಭಟ್, ಶಿವಚಂದ್ರ ಈಶ್ವರಮಂಗಲ, ಶೇಖರ ರೈ ಕುಂಬ್ರ, ವೆಂಕಟರಮಣ ಭಟ್ ಪೆರ್ಲಂಪಾಡಿ, ರಾಬರ್ಟ್ ಸಹಿತ ಹಲವು ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ರೈತರ ಬೇಡಿಕೆಯ ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net