ಮುಕ್ತ ವ್ಯಾಪಾರದಿಂದ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮದ ರೈತರಿಗೆ ಹೊಡೆತ

22-klr-2
Published on

ಕೋಲಾರ: ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮದ (ಕೋಳಿ ಸಾಕಾಣಿಕೆ) ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ವಿವಿಧ ಪ್ರಗತಿ ಪರಸಂಘಟನೆಗಳಿಂದ ಫೆ.24ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯರೆಡ್ಡಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ವ್ಯಾಪಾರದ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೇಶಕ್ಕೆ ಆಹ್ವಾನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಕ್ತ ವ್ಯಾಪಾರಕ್ಕೆ ತೆರೆದಿಡುವ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿರುವುದು ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಆತಂಕ ವ್ತಕ್ತಪಡಿಸಿದರು.

ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದರೆ ಭಾರತಕ್ಕೆ ವಾರ್ಷಿಕ ಅಂದಾಜು 42,000 ಕೋಟಿ ಮೌಲ್ಯದ ಹೈನುಗಾರಿಕೆ, ಕೋಳಿ ಉತ್ಪನ್ನಗಳು, ಟರ್ಕಿ ಮತ್ತಿತರ ಕೃಷಿ ಉತ್ಪನ್ನಗಳ ಆಮದುವಾಗುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.

ಈ ಹಿಂದೆ ರೈತರ ಪ್ರತಿಭಟನೆಗಳಿಗೆ ಮಣಿದು ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಹೇಳಿಕೊಂಡ ಕೇಂದ್ರ ಸರ್ಕಾರ ಈಗ ಹೊಸ ಒಪ್ಪಂದದ ಮೂಲಕ ಆರ್‌ಸಿಇಪಿಗಿಂತಲೂ ಹೆಚ್ಚು ನಷ್ಟ ಉಂಟು ಮಾಡುವ ಒಪ್ಪಂದಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಈ ತೀರ್ಮಾನ ಕೈಬಿಡುವಂತೆ ಒತ್ತಾಯಿಸಿ ಫೆ.24ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ಆನಂದ್‌ರಾವ್ ಸರ್ಕಲ್‌ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಗೆ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ಹೆಚ್ಚಿನ ರೈತರು, ಮಹಿಳೆಯರು, ಕುಕ್ಕುಟೋದ್ಯಮಿಗಳು ಪಾಲ್ಗೊಳ್ಳಬೇಕೆಂದು ಕೋರಿದರು.

ರೈತ ಸಂಘದ ರಾಜ್ಯ ಮುಖಂಡ ಅಬ್ಬಣಿ ಶಿವಪ್ಪ ಮಾತನಾಡಿ, ಹೈನುಗಾರಿಕೆ ಉದ್ಯಮದಲ್ಲಿ ಹಾಲಿನ ಬೆಲೆಯ 71 ರಷ್ಟು ಹಣ ರೈತರ ಕುಟುಂಬಗಳಿಗೆ ವಾಪಸ್ಸಾಗುತ್ತಿತ್ತು. ಈಗ ಅಮೆರಿಕದ ಬೇಡಿಕೆಯಂತೆ ಹೈನುಗಾರಿಕೆ ಉತ್ಪನ್ನಗಳ ಆಮದಿನ ಮೇಲೆ ಶೇ.64ತೆರಿಗೆ ಕಡಿತಗೊಳಿಸಿದರೆ ಹೈನೋದ್ಯಮ ನೆಲಕಚ್ಚುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್, ಜಿಲ್ಲಾಧ್ಯಕ್ಷ ಮುನಿವೆಂಕಟೇಗೌಡ, ಕೆಪಿಆರ್‌ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net