ಬಿತ್ತನೆ ಬೀಜ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಿ

12 HBD 1
ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ರೈತ ಸಂಪರ್ಕ ಕೇಂದ್ರದಲ್ಲಿ ಬುಧವಾರ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ರೈತರಿಗೆ ಬೀಜ ವಿತರಿಸಿದರು. ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ವಿಶ್ವನಾಥ ಪಾಟೀಲ್, ಕೃಷಿ ಇಲಾಖೆ ಎಡಿ ಗೌತಮ ಇತರರಿದ್ದರು.
Published on

ಹುಮನಾಬಾದ್: ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತಿರುವ ಮುಂಗಾರು ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ತೊಂದರೆಯಾದರೆ ಸಹಿಸುವುದಿಲ್ಲ ಎಂದು ಕೃಷಿ ಅಧಿಕಾರಿಗಳಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹುಮನಾಬಾದ್, ದುಬಲಗುಂಡಿ, ಹಳಿಖೇಡ(ಬಿ) ರೈತ ಸಂಪರ್ಕ ಕೇಂದ್ರಗಳಿಗೆ ಬುಧವಾರ ಭೇಟಿ ನೀಡಿ ಬೀಜಗಳ ದಾಸ್ತಾನು, ರೈತರಿಗೆ ಬೀಜ ವಿತರಣೆ ಕಾರ್ಯವೈಖರಿ ಪರಿಶೀಲಿಸಿ ಮಾತನಾಡಿದ ಅವರು, ರೈತರು ಮೊದಲೇ ಸಾಕಷ್ಟು ಸಂಕಟದಲ್ಲಿದ್ದು, ಬೀಜ ವಿತರಣೆಯಲ್ಲಿ ಸಮಸ್ಯೆಹಾಗೂ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೇಡಿಕೆ ಇರುವ ಬೀಜಗಳನ್ನು ತರಿಸಿಕೊಳ್ಳಬೇಕು. ಈ ಬಗ್ಗೆ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತಂದರೆ ಸಂಬಂಧಿತ ಕೃಷಿ ಅಧಿಕಾರಿಗಳಿಗೆ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಒಟ್ಟಿನಲ್ಲಿ ರೈತರಿಗೆ ತೊಂದರೆಯಾಗದಂತೆ ಹಾಗೂ ಅವರಿಗೆ ಮುಂಗಾರು ಬಿತ್ತನೆಯ ಸಲಹೆ ಸೂಚನೆಗಳನ್ನು ಸಮಯಕ್ಕೆ ತಕ್ಕಂತೆ ನೀಡಬೇಕೆಂದು ತಾಕೀತು ಮಾಡಿದರು.

ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗೌತಮ ಮಾತನಾಡಿ, ತಾಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಹೆಚ್ಚುವರಿ ಕೇಂದ್ರಗಳಲ್ಲಿ ಬೀಜ ವಿತರಣೆ ಸುಗಮವಾಗಿ ನಡೆಯುತ್ತಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಮಳೆಯಾಗುತ್ತಿದ್ದು , ರೈತರು ಬಿತ್ತನೆ ಕೈಗೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಹಾಗೂ ತಾಲೂಕು ಅಧ್ಯಕ್ಷ ವಿಶ್ವನಾಥ ಪಾಟೀಲ್ ಮಾಡಗೂಳ, ಬಿಜೆಪಿ ಮುಖಂಡರಾದ ಗೋಪಾಲಕೃಷ್ಣ ಮೋಹಳೆ, ಅನಿಲ ಪಸಾರ್ಗಿ, ಸಂಜು ವಾಡೇಕರ, ಸುನೀಲ ಪತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net