

ಬೆಂಗಳೂರು: ಹಲೋ ಬದಲು ಜೈ ಕಿಸಾನ್ ಹೇಳುವಂತೆ ಕರೆ ನೀಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, ಇದೀಗ ರಾಷ್ಟ್ರಕವಿ ಕುವೆಂಪು ವಿರಚಿತ ‘ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ’ ಗೀತೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಈ ಹಾಡು ರೈತಗೀತೆಯೆಂದೇ ಪ್ರಖ್ಯಾತಿ ಹೊಂದಿದೆ, ಅನ್ನದಾತನ ಮಹತ್ವವೇನು? ಎನ್ನುವುದನ್ನು ಸಾರಿ ಹೇಳುತ್ತದೆ. ಅಷ್ಟೇ ಅಲ್ಲ, ಕಾರ್ಯಕ್ರಮಗಳಲ್ಲಿ ಈ ಗೀತೆ ಮೊಳಗುತ್ತಿದ್ದಂತೆಯೇ ಎದ್ದುನಿಂತು ಗೌರವವನ್ನೂ ಸೂಚಿಸಲಾಗುತ್ತದೆ.
ಇದೀಗ ಕೃಷಿ ಸಚಿವರು ರೈತರ ಮಹತ್ವವನ್ನು ಸಾರುವ ಈ ಹಾಡನ್ನು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಅಧಿಕಾರಿಗಳು, ಸಿಬ್ಬಂದಿ, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ರೈತರು ಮೊಬೈಲ್ ಕಾಲರ್ ಟೋನ್ ಮತ್ತು ರಿಂಗ್ ಟೋನ್ ಆಗಿ ಬಳಸುವಂತೆ ಮಾಡುವ ಉದ್ದೇಶ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕಳಪೆ ಬಿತ್ತನೆ ಬೀಜ, ಗೊಬ್ಬರ, ಔಷಧ ಮಾರಾಟ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವವರ ಆಟ ಇನ್ಮುಂದೆ ನಡೆಯಲ್ಲ. ಅವರ ಕಥೆ ಮುಗಿಸುತ್ತೇವೆ. ಈಗಾಗಲೆ 15 ಕೋಟಿ ರೂ. ಮೌಲ್ಯದ ಕಳಪೆ ಬೀಜ, ಗೊಬ್ಬರ ವಶಕ್ಕೆ ಪಡೆಯಲಾಗಿದೆ. ಕೆಲವರನ್ನು ಜೈಲಿಗೆ ಕಳಿಸಿದ್ದೇವೆ. ನಮ್ಮ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ.
| ಬಿ.ಸಿ.ಪಾಟೀಲ್ ಕೃಷಿ ಸಚಿವ