

ಬೆಳಗಾವಿ: ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ಜು.21ರಂದು ಮಧ್ಯಾಹ್ನ 12 ಗಂಟೆಗೆ ರೈತ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮೊಖಾಶಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರಗುಂದ ರೈತ ಬಂಡಾಯದ ಘಟನೆ ನಡೆದು 43 ವರ್ಷಗಳಾಗಿವೆ. ಅದರಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ್ದ ಬೆಳೆಗಳು ಹಾಳಾಗುತ್ತಿವೆ. ಹಾಗಾಗಿ ರಾಜ್ಯವನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಬೇಕು. ರೈತರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಚನ್ನಪ್ಪ ಗಣಾಚಾರಿ, ಶಿವಪುತ್ರಪ್ಪ ಜಕಬಾಳ, ಶಿವನಗೌಡ ಗೌಡರ, ಬಾಳಪ್ಪ ಪಾಟೀಲ, ವೈಜು ಲೂಮಾಚೆ ಇತರರಿದ್ದರು.