

ಸಿಂದಗಿ: ಸಮಾಜದಲ್ಲಿನ ಮೌಢ್ಯಗಳಿಗೆ ಹೆಣ್ಣು ಮಕ್ಕಳು ಗುಲಾಮರಾಗದೆ ಸಂವಿಧಾನ ಕೊಟ್ಟ ಹಕ್ಕನ್ನು ಬಳಸಿಕೊಂಡು, ತಮಗಾದ ದೌರ್ಜನ್ಯ ಮೆಟ್ಟಿ ಅದರ ವಿರುದ್ಧ ಗಟ್ಟಿ ಧ್ವನಿ ಮೊಳಗಿಸಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಸಲಹೆ ನೀಡಿದರು.
ನಗರದ ಚೌಡೇಶ್ವರಿ ಸಭಾ ಮಂಟಪದಲ್ಲಿ ಮಂಗಳವಾರ ಸ್ಫೂರ್ತಿ ತಾಲೂಕು ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಹೆಣ್ಣು ಎಂದಿಗೂ ಪುರುಷರನ್ನು ದ್ವೇಷಿಸುವುದಿಲ್ಲ. ಡಾ. ಬಾಬಾಸಾಹೇಬ ಅಂಬೇಡ್ಕರ್ ಹೇಳಿದಂತೆ, ಅವಮಾನಕ್ಕಿಂತ ದೊಡ್ಡ ಗಾಯವಿಲ್ಲ ಎಂಬಂತೆ ಮಹಿಳೆಯರಿಗೆ ಅವಮಾನ ತಪ್ಪಿದ್ದಲ್ಲ. ಆದರೂ ಅದನ್ನು ಮೆಟ್ಟಿ ನಿಲ್ಲುವಲ್ಲಿ ನಾವು ಹೋರಾಟದ ಬದುಕು ರೂಪಿಸಿಕೊಳ್ಳಬೇಕು. ಸಮಸ್ಯೆ, ದೌರ್ಜನ್ಯ, ಕಿರುಕುಳ, ಮೋಸ, ಭಯ ಬಿತ್ತುವವರ ವಿರುದ್ಧ ಎದುರುಗೊಳ್ಳಬೇಕು. ಮಹಿಳಾ ಆಯೋಗದ ದೊಡ್ಡ ಶಕ್ತಿ ಪೊಲೀಸ್ ವ್ಯವಸ್ಥೆ. ಅಲ್ಲಿಗೆ ಹೋಗಿ ನ್ಯಾಯ ಕೇಳಿ, ಗ್ರಾಪಂ ಮಟ್ಟದಲ್ಲಿ ಕಾವಲು ಸಮಿತಿಯಿದ್ದು, ಅಲ್ಲಿ ಹೋಗಿ, ಅವರು ಸ್ಪಂದಿಸದಿದ್ದರೆ ಡಿಸಿ ಬಳಿ ಹೋಗಿ, ಇಲ್ಲವೇ ಆಯೋಗದ ಬಳಿಗೆ ಬಂದು ತಮಗಾದ ನೋವು ಹಂಚಿಕೊಂಡು ಸೂಕ್ತ ನ್ಯಾಯ ಪಡೆದುಕೊಳ್ಳುವ ಮೂಲಕ ನವ ಭಾರತ ಸೃಷ್ಟಿಸಿರಿ ಎಂದರು.
ಇನ್ನರ್ ವ್ಹೀಲ್ ಕ್ಲಬ್‌ನ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಮಾತನಾಡಿ, ಮಹಿಳೆಯರಿಗೆ ಮಾ.8 ಒಂದೇ ದಿನ ಮಹಿಳಾ ದಿನಾಚರಣೆಯಲ್ಲ. ದು ನಿತ್ಯ ನಿರಂತರವಾಗಿದೆ. ದೌರ್ಜನ್ಯಗಳನ್ನು ಮೆಟ್ಟಿ ನಿಲ್ಲುವ ದಿನವೇ ಮಹಿಳಾ ದಿನ. ಪುರುಷರು ನೀಡುವ ಬೆಂಬಲವನ್ನು ಯಾವುದೇ ಹೆಣ್ಣು ಮಕ್ಕಳು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.
ಶೈಲಾ ಸಂಗಮ, ಸಿಸ್ಟರ್ ಸಿಂಥಿಯಾ ಡಿ. ಮೆಲ್ಲೋ, ರಾಜ್ಯ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮಮತಾ ಯಜಮಾನ, ಗ್ರೇಡ್-2 ತಹಸೀಲ್ದಾರ್ ಐ.ಎಂ. ಬಳಗಾನೂರ, ಡಾ.ಎನ್.ಎಂ. ಮೊಗಲಾಯಿ, ಸರಿತಾ ಹರಿಜನ, ಸುಜಾತಾ ಕಲಬುರ್ಗಿ, ಮಹಾನಂದಾ ಬಮ್ಮಣ್ಣಿ, ನೀಲಮ್ಮ ಯಡ್ರಾಮಿ, ರಾಜಶೇಖರ ಕೂಚಬಾಳ, ಾ. ಸಂತೋಷ ಎಸ್.ಜೆ. ಸೇರಿ ಮಹಿಳಾ ಸ್ವ-ಸಹಾಯ ಸಂಘಗಳ ಹಲವಾರು ಮಹಿಳೆಯರಿದ್ದರು.