

ರಾಯಚೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರನ್ನು ಸಂಘಟಿಸಿ ಬಿಜೆಪಿ ಧ್ವಜ ಹಾರಿಸಲು ಸಂಘಟಿತ ಪ್ರಯತ್ನ ಮಾಡಲಾಗುವುದು ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಹಾಗೂ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಶನಿವಾರ ಅಧಿಕಾರ ಸ್ವೀಕರಿಸಿ ಮಾತನಾಡಿ, ಪಕ್ಷಕ್ಕೆ ಶಕ್ತಿ ತುಂಬಲು ಕಾರ್ಯಕರ್ತರೇ ಕಾರಣ. ಎಲ್ಲರೂ ಸಂಘಟಿತರಾಗಿ ಯುದ್ದೋಪಾದಿಯಲ್ಲಿ ಕೆಲಸ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಬೇಕು ಎಂದರು.
ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಆಗಿರುವ ಬದಲಾವಣೆ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ.
ಉಚಿತ ಅಕ್ಕಿ ನೀಡಲು ಸಾಧ್ಯವಾಗಿಲ್ಲ. ಉಚಿತ ವಿದ್ಯುತ್ ಹೆಸರಿನಲ್ಲಿ ವಿದ್ಯುತ್ ದರ ಹೆಚ್ಚಾಸಲಾಗಿದೆ. ಪ್ರಧಾನಿ ಮೋದಿ 10 ವರ್ಷದಲ್ಲಿ ದೇಶದ ಚಿತ್ರಣವನ್ನು ಬದಲಿಸಿದ್ದು, ರಾಮಮಂದಿರದ ಕನಸು ನನಸಾಗುತ್ತಿದೆ. ಪಕ್ಷವನ್ನು ಸಂಘಟಿಸುವ ಕೆಲಸವನ್ನು ವರಿಷ್ಠರು ನೀಡಿದ್ದು, ಅದನ್ನು ಪ್ರಾಮಾಣಿಕತೆಯಿಂದ ಮಾಡಲಾಗುವುದು ಎಂದು ಡಾ.ಶಿವರಾಜ ಪಾಟೀಲ್ ಹೇಳಿದರು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ದೇಶದಲ್ಲಿ ಬಿಜೆಪಿ ಬಲವಾಗಿ ಬೆಳೆದಿದೆ. ಜಿಲ್ಲೆಯಲ್ಲಿ ಮಾತ್ರ ಹೆಚ್ಚು ಶಾಸಕ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಜನರ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು. ನೂತನ ಜಿಲ್ಲಾಧ್ಯಕ್ಷರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸಬೇಕು ಎಂದರು.
ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸೋತಿರಬಹುದು, ಆದರೆ ದೇಶದಲ್ಲಿ ಬಿಜೆಪಿ ನಂಬರ್ ಒನ್ ಸ್ಥಾನದಲ್ಲಿದೆ. ಪಕ್ಷ ನಿಷ್ಠೆ ಮತ್ತು ಕಷ್ಟಪಟ್ಟು ಪಕ್ಷ ಕಟ್ಟುವ ಕೆಲಸ ಮಾಡಬೇಕಾಗಿದೆ. ಕೇವಲ ಜೈಕಾರಗಳಿಗೆ ಸಿಮೀತವಾಗದೆ ಪಕ್ಷವನ್ನು ಕೆಳಮಟ್ಟದಿಂದ ಕಟ್ಟುವ ಕೆಲಸ ಮಾಡಬೇಕು. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ದೃಢ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಡಾ.ಶಿವರಾಜ ಪಾಟೀಲ್ ನೂತನ ಜಿಲ್ಲಾಧ್ಯಕ್ಷ ಸ್ಥಾನದ ಅಧಿಕಾರವನ್ನು ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಗಂಗಾಧರ ನಾಯಕ, ಮುಖಂಡರಾದ ಕೆ.ಕರಿಯಪ್ಪ, ಶರಣಪ್ಪಗೌಡ ಕ್ಯಾದಿಗ್ಗೇರಾ, ರವೀಂದ್ರ ಜಲ್ದಾರ್, ಶಂಕರರೆಡ್ಡಿ, ಕೆ.ಎಂ.ಪಾಟೀಲ್ ಉಪಸ್ಥಿತರಿದ್ದರು.