

ಕಂಪ್ಲಿ: ಮಕ್ಕಳು ಅಂಕಗಳಿಕೆಯ ಯಂತ್ರವಾಗದೆ ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಬೇಕು ಎಂದು ಕಲಬುರಗಿ ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ ಜಿ.ಅಮರೇಗೌಡ ಹೇಳಿದರು.
ಇದನ್ನೂ ಓದಿ:ಕಲೆ, ಸಾಹಿತ್ಯದ ಅರಿವು ಮುಖ್ಯ
ಚಿಕ್ಕಜಾಯಿಗನೂರಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಮಾವಿನಹಳ್ಳಿಯ ಶ್ರೀ ಸಿದ್ಧೇಶ್ವರ ರಂಗ ಸಂಸ್ಥೆ ಕಲ್ಚರಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮೀಣ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರಿಗೆ ಗ್ರಾಮೀಣ ಕಲೆಗಳ ಅರಿವು ಮೂಡಿಸಬೇಕಿದೆ ಎಂದರು.
ಹಿಂದೂಸ್ತಾನಿ ಗಾಯಕ ಡಿ.ಪುರುಷೋತ್ತಮ ಮಾತನಾಡಿ, ಮೊಬೈಲ್ ಶಿಕ್ಷಣಕ್ಕೆ ಪೂರಕವಾಗಬೇಕೇ ಹೊರತು ಮನರಂಜನೆಯ ಮಾಧ್ಯಮ ಆಗಬಾರದು. ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಚಂದ್ರಶೇಖರ ಬಸಾಪುರ ತಂಡದಿಂದ ಸುಗಮ ಸಂಗೀತ, ಸಣಾಪುರದ ಎಸ್.ಸಂಗೀತ ತಂಡದಿಂದ ನೃತ್ಯ, ಅಶ್ವಿನಿ ನೃತ್ಯ ಅಕಾಡೆಮಿಯಿಂದ ಮೋಳಿಗೆ ಮಾರಯ್ಯ ಐತಿಹಾಸಿಕ ನಾಟಕ, ಎಚ್.ಭೀಮೇಶ ತಂಡದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಟ್ರಸ್ಟ್ ಅಧ್ಯಕ್ಷ ಬಿ.ಗುರುಮಹಾಂತೇಶ, ಕಾರ್ಯದರ್ಶಿ ಕುರುಬರ ಹೇಮೇಶ್ವರ, ಗ್ರಾಪಂ ಅಧ್ಯಕ್ಷೆ ಕವಿತಾ ಪಂಪನಗೌಡ, ರಂಗಭೂಮಿ ಕಲಾವಿದ ವಿಜಯಕುಮಾರ್ ಇತರರಿದ್ದರು.