

ತೇರದಾಳ: ಮನುಷ್ಯರು ನಾಗರಿಕರಾಗುವ ಪಾಠ ಕಲಿಯುವ ಹೊತ್ತಿಗಾಗಲೇ ಆಯುರ್ವೇದ ವೈದ್ಯ ಪದ್ಧತಿಯನ್ನು ಜಗತ್ತಿಗೆ ನೀಡುವ ಮೂಲಕ ಅದಕ್ಕೆ ಪ್ರಾಶಸ್ತ್ಯ ಸಿಗುವಲ್ಲಿ ಚರಕ ಮಹರ್ಷಿಯ ಪಾತ್ರ ಹಿರಿದಾದುದು ಎಂದು ಪಟ್ಟಣದ ಜೆವಿ ಮಂಡಳದ ಕೋಶಾಧ್ಯಕ್ಷ ಡಾ.ಜೆ.ಎಸ್.ಆಲಗೂರ ಹೇಳಿದರು.
ಇಲ್ಲಿನ ಜೆವಿ ಮಂಡಳದ ಗ್ರಾಮೀಣ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡ ಚರಕ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನಾದ್ಯಂತ ಇಂದು ಆಯುರ್ವೇದ ವೈದ್ಯ ಪದ್ಧತಿಗೆ ಬಹಳಷ್ಟು ಬೇಡಿಕೆ ಬಂದಿದೆ. ಇದರ ಹಿಂದಿರುವ ಬಹುದೊಡ್ಡ ಶಕ್ತಿ ಚರಕ ಹಾಗೂ ಶುಶ್ರುತರಂತಹ ಮಹರ್ಷಿಗಳು. ಇಂದು ನಾವೆಲ್ಲ ಈ ಪ್ರಾಚೀನ ವೈದ್ಯ ಪದ್ಧತಿಯನ್ನು ಮನೆಮನೆಗೆ ತಲುಪಿಸಲು ಪಣ ತೊಡಬೇಕಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಎಲ್.ಎಂ.ಬಿರಾದಾರ ಮಾತನಾಡಿ, ಆಧುನಿಕ ವೈದ್ಯ ಪದ್ಧತಿಗಳು ಜನಿಸುವ ನೂರು ವರ್ಷಕ್ಕೂ ಮೊದಲೇ ಇಂತಹದ್ದೊಂದು ವೈದ್ಯ ಪದ್ಧತಿಯನ್ನು ಬಹಳಷ್ಟು ಅಚ್ಚುಕಟ್ಟಾಗಿ ದಾಖಲಿಸಿದ ಚರಕ ಮಹರ್ಷಿ ಕೊಡುಗೆ ನಮಗೆಲ್ಲ ಅಚ್ಚರಿಯಗಳಲ್ಲೊಂದು. ಈ ವೈದ್ಯ ಪದ್ಧತಿಗೆ ಇನ್ನಷ್ಟು ಆಧುನಿಕ ಸ್ಪರ್ಷ ನೀಡುವ ಕೆಲಸ ಈಗಿನ ವೈದ್ಯಕೀಯ ಸಂಶೋಧಕರಿಂದ ನಡೆಯಬೇಕಿದೆ ಎಂದರು.
ಡಾ.ವಿಜಯಾ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚರಕ ಮಹರ್ಷಿ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಡಾ. ಅನ್ನಪೂರ್ಣ ಪರಡ್ಡಿ, ಡಾ.ಶರಣು ನುಚ್ಚಿ, ಡಾ.ಎಸ್.ಪಿ.ರಜಪೂತ, ಸಿಬ್ಬಂದಿ ಉಪಸ್ಥಿತರಿದ್ದರು. ಭವಾನಿ ಕಾರ್ಯಕ್ರಮ ನಿರೂಪಿಸಿದರು.