

ಬೆಂಗಳೂರು ಗ್ರಾಮಾಂತರ: ಜ. 25 ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷವಾಗಿ ಆಚರಿಸುವ ಮೂಲಕ ಮತದಾರರಲ್ಲಿ ಚುನಾವಣೆ ಹಾಗೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಕಾಲ ಮಿಷನ್‌ನ ಅಪರ ನಿರ್ದೇಶಕಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಡಾ.ಬಿ.ಆರ್.ಮಮತಾ ಹೇಳಿದರು.
ದೇವನಹಳ್ಳಿಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧಿಸಿದಂತೆ ಮತದಾರರ ಪಟ್ಟಿ ತಯಾರಿಸುವಿಕೆ ಹಾಗೂ ಸಂಬಂಧಿತ ಕಾರ್ಯಗಳ ಕುರಿತ ಮೂರನೇ ಹಂತದ ಸಭೆಯಲ್ಲಿ ಮಾತನಾಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಈಗಾಗಲೇ ಅಂತಿಮ ಹಂತ ತಲುಪಿದ್ದು, ಮುದ್ರಣಕ್ಕೆ ಹೋಗುವ ಮುನ್ನ ಬಿಎಲ್‌ಒಗಳು ಮತ್ತೊಮ್ಮೆ ಪಟ್ಟಿಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಹೊಸದಾಗಿ ಹೆಸರುಗಳನ್ನು ಸೇರಿಸಿರುವ ಯುವ ಮತದಾರರಿಗೆ ಚುನಾವಣಾ ಗುರುತಿನ ಚೀಟಿಯನ್ನು ಗಣ್ಯರು, ಸ್ಥಳೀಯ ಜನಪ್ರತಿನಿಧಿಗಳಿಂದ ವಿತರಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.
ವಿವಿಧ ಕಾರ್ಯಕ್ರಮ ಆಯೋಜನೆ: ರಾಷ್ಟ್ರೀಯ ಮತದಾರರ ದಿನಾಚರಣೆಯಂದು ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಬಿಎಲ್‌ಒಗಳು ಮತದಾರರ ಪಟ್ಟಿಯ ಪ್ರತಿ ಪುಟಗಳನ್ನು ಪರಿಶೀಲಿಸಬೇಕು ಹಾಗೂ ಇತ್ತೀಚೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ನಂತರ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕುಗಳ ಕೈಗಾರಿಕಾ ಪ್ರದೇಶದ ಗ್ರಾಮಗಳಲ್ಲಿ ವಾಸಿಸುತ್ತಿರುವ ಮತದಾರರ ವಿಳಾಸ, ಲಿಂಗ, ಭಾವಚಿತ್ರ ಸರಿಯಾಗಿ ಇದೆಯೇ ಎಂಬುದನ್ನು ಮತ್ತೆ ಪರಿಶೀಲಿಸಲು ಬಿಎಲ್‌ಒಗಳಿಗೆ ಸೂಚಿಸಿದರು.