ಅರಿವು ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸಿ

Give Knowledge for Election
ವಿಜಯಪುರ ಜಿಪಂ ಸಿಇಒ ಕಚೇರಿ ಸಭಾಂಗಣದಲ್ಲಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಸ್ವೀಪ್ ಸಮಿತಿ ಸಭೆ ನಡೆಸಿದರು. ವಿಜಯಕುಮಾರ ಮೆಕ್ಕಳಕಿ, ಬಿ.ವೈ. ಸುರಖೋಡ ಇದ್ದಾರೆ.
Published on

ವಿಜಯಪುರ: ಕಳೆದ ಚುನಾವಣೆಗಳಲ್ಲಿ ಶೇ.60ಕ್ಕಿಂತಲೂ ಕಡಿಮೆ ಮತದಾನ ಆಗಿರುವ 298 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಗಮನ ಹರಿಸಿ, ಸ್ವೀಪ್ ಸಮಿತಿ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸುವಂತೆ ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಸಿಇಒ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸ್ವೀಪ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ, ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಮತದಾನಕ್ಕೆ ಕ್ರಮ ವಹಿಸಬೇಕು.

ಕಳೆದ ಚುನಾವಣೆಗಳಲ್ಲಿ ಅತಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ಮುಂದೆ ಚಿತ್ರಗಳನ್ನು ಬಿಡಿಸುವ ಮೂಲಕ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರಲ್ಲಿ ಕಡ್ಡಾಯ ಮತದಾನಕ್ಕೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಬಿಎಜಿ ಹಾಗೂ ಜಾಗೃತ್ ಕ್ಲಬ್ ಸದಸ್ಯರು ಮತಗಟ್ಟೆ ವ್ಯಾಪ್ತಿಯ ಪ್ರತಿ ಮನೆ-ಮನೆಗೆ ಭೇಟಿ ನೀಡಿ ಮತದಾರರಲ್ಲಿ ಅರಿವು ಮೂಡಿಸಬೇಕು. ಈ ಅರಿವು ಹಾಗೂ ಜಾಗೃತಿ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಸ್ವಿಪ್ ಸಮಿತಿ ಸದಸ್ಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಭಾಗವಹಿಸಿ ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದರು. ಮುಂದುವರಿದು ಜಾಗೃತಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಮತದಾನ ಕುರಿತ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ಹೇಳಿದರು.

ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ವೈ. ಸುರಖೋಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜಕುಮಾರ ಯರಗಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆ.ಕೆ. ಚವಾಣ್, ಜಿಪಂ ಯೋಜನಾ ಉಪ ನಿರ್ದೇಶಕ ಎ.ಬಿ. ಅಲ್ಲಾಪುರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿರಹಟ್ಟಿಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net