

ಚನ್ನರಾಯಪಟ್ಟಣ: ಸಮಾಜದಲ್ಲಿ ಲಿಂಗ ತಾರತಮ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅವಶ್ಯ ಇದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಸಿ.ದೀಪು ತಿಳಿಸಿದರು.
ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಹೆಣ್ಣು ಮತ್ತು ಗಂಡು ಲಿಂಗ ತಾರತಮ್ಯ ಕುರಿತು ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಂಡು ಮತ್ತು ಹೆಣ್ಣು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು ಅರಿತು ಪುರುಷ ಮತ್ತು ಮಹಿಳೆಯರಲ್ಲಿ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳಬೇಕು. ಗಂಡು ಮತ್ತು ಹೆಣ್ಣೆಂಬ ತಾರತಮ್ಯ ಧೋರಣೆ ಇಂದಿಗೂ ಜೀವಂತವಾಗಿದೆ. ಇಬ್ಬರೂ ಸಮಾನರು ಎಂಬ ಭಾವನೆ ಇನ್ನು ಸಮಾಜದಲ್ಲಿ ಮೂಡಿಲ್ಲ. ಗಂಡು ಮಗು ಜನಿಸಿದಾಗ ಇರುವ ಸಂತಸ, ಹೆಣ್ಣು ಮಗು ಜನಿಸಿದಾಗ ಇರುವುದಿಲ್ಲ. ಹೆಣ್ಣು ಮಗು ಹುಟ್ಟುವ ಹಕ್ಕನ್ನೇ ನಿರಾಕರಿಸುತ್ತಿರುವುದು ವಿಷಾದನೀಯ ಎಂದರು.
ನಮ್ಮ ದೇಶ ಪುರುಷ ಪ್ರಧಾನ ಸಮಾಜವಾಗಿದ್ದು, ತಾಯಂದಿರಿಗೆ ಗಂಡು ಮಕ್ಕಳೆಂದರೆ ಎಲ್ಲಿಲ್ಲದ ಆಸಕ್ತಿಯಿಂದಾಗಿ ಇಂದಿಗೂ ಸಹ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇವೆ. ಸಮಾಜದಲ್ಲಿ ಹುಟ್ಟಿನಿಂದ ಸಾಯುವವರೆಗೂ ಗಂಡು ಮಕ್ಕಳಿಗೆ ಒಂದು ವಿಶೇಷ ಪ್ರಾತಿನಿಧ್ಯ ನೀಡುವುದನ್ನು ನಾವು ಕಾಣಬಹುದು. ಮಹಿಳೆಯರು ಮೊದಲು ಹೆಣ್ಣು ಮಕ್ಕಳಿಗೆ ಪ್ರಾಶಸ್ಯ ನೀಡಿದಾಗ ಮಾತ್ರ ಸಮಾಜ ಬದಲಾವಣೆಯಾಗಲು ಸಾಧ್ಯ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಆದರೆ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ದುರುಪಯೋಗ ಮಾಡಬಾರದು. ಹೆಣ್ಣು ಭ್ರೂಣಲಿಂಗ ಪತ್ತೆಯು ಕಾನೂನಿಗೆ ವಿರುದ್ಧವಾಗಿದ್ದು, ಈ ಬಗ್ಗೆ ಸಮಾಜದಲ್ಲಿ ಇನ್ನಷ್ಟು ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಹೆಣ್ಣು ಮತ್ತು ಗಂಡು ಮಗುವನ್ನು ಸಮಾನವಾಗಿ ಕಂಡಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದಿನ ಯುವಜನರು ಮತ್ತು ಸಂಘ, ಸಂಸ್ಥೆಗಳು ಲಿಂಗ ತಾರತಮ್ಯ ಮಾಡದಂತೆ ಹೆಣ್ಣು ಮಕ್ಕಳನ್ನು ಉಳಿಸಿ, ಓದಿಸಿ ಬದುಕಲು ಅವಕಾಶ ಮಾಡಿಕೊಡಬೇಕು. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಶಿಕ್ಷಣ, ರಾಜಕೀಯ, ಉದ್ಯೋಗ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಬೇಕು. ಹೆಣ್ಣುಮಕ್ಕಳಿಗೆ ಅನ್ವಯಿಸುವಂತೆ ಹಲವು ಕಾಯ್ದೆ ಕಾನೂನುಗಳು ಜಾರಿಯಲ್ಲಿವೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುಂದರ್ ರಾಜ್ ಮಾತನಾಡಿ, ಮಹಿಳೆಯರು ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೂಲಕ ಲಿಂಗ ತಾರತಮ್ಯ ನಿರ್ಮೂಲನೆ ಮಾಡಬೇಕು. ಮಹಿಳೆಯರು ಎಲ್ಲಾ ರೀತಿಯ ತಾರತಮ್ಯಗಳಿಂದ ಬಿಡುಗಡೆ ಹೊಂದುಬೇಕು. ಇತರರನ್ನು ಸಮಾನವಾಗಿ ಕಾಣುವ ಜತೆಗೆ ಆರ್ಥಿಕವಾಗಿ ಸ್ವಾವಲಂಬಿಯಾಗುವಂತಾಗಬೇಕು. ಇದಕ್ಕೆ ಅವರಲ್ಲಿ ಆತ್ಮವಿಶ್ವಾಸ, ಸ್ವ ಸಾಮರ್ಥ್ಯದಿಂದ ಅವರ ಬದುಕಿಗೆ ಅವರೇ ಒಡತಿಯರಾಗಬೇಕಿದೆ. ಮಹಿಳೆಯರ ಬಗ್ಗೆ ಸಮಾಜದ ಮನೋಭಾವದಲ್ಲಿ ಬದಲಾವಣೆಯಾಗಬೇಕಿದೆ. ಪ್ರತಿದಿನ ಬದುಕಿನಲ್ಲಿ ಮಹಿಳೆ ಪಡೆಯುವ ಅನುಭಾವವು ಅರಿವಾಗಿ ಪರಿವರ್ತನೆಗೊಳ್ಳಬೇಕು ಎಂದರು.
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಸ್.ಇಂದ್ರ ಮಾತನಾಡಿ ಸಮಾಜದಲ್ಲಿ ಹೆಣ್ಣು-ಗಂಡು ಎಂಬ ಅಸಮಾನತೆ, ಲಿಂಗತಾರತಮ್ಯ ನಮ್ಮ ನಮ್ಮ ಮನೆಗಳಿಂದಲೇ ತೊಡೆದು ಹಾಕಬೇಕು. ಲಿಂಗ ಸಮಾನತೆ ನಮ್ಮಿಂದಲೇ ಆರಂಭಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವುದು ವಿಷಾದಕರ ಸಂಗತಿ. ಪಾಲಕರು ಮಕ್ಕಳ ಚಲನವಲನಗಳ ಬಗ್ಗೆ ನಿಗಾ ವಹಿಸಬೇಕು, ತಿಳುವಳಿಕೆ ನೀಡುವ ಕೆಲಸ ಮಾಡಬೇಕು. ಹೊರಗಿನ ಯಾವುದೇ ವ್ಯಕ್ತಿಯ ಆಸೆ-ಆಮಿಷಗಳಿಗೆ ಒಳಗಾಗದಂತೆ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹೊಯ್ಸಳ ಜಾನಪದ ಕಲಾ ಸಂಸ್ಥೆ ತಂಡದ ಮುಖ್ಯಸ್ಥ ಬಿ.ಟಿ.ಮಾನವ ಹಾಗೂ ಕಲಾವಿದರು ಲಿಂಗ ತಾರತಮ್ಯದ ಕುರಿತು ನಾಟಕ ಪ್ರದರ್ಶಿಸಿ ಜನಜಾಗೃತಿ ಮೂಡಿಸಿದರು.
ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಇಡಿ ಕುಮಾರ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರ್ಚನಾ, ಮೇಲ್ವಿಚಾರಕಿಯರಾದ ಮಮತಾ, ಪಾರ್ವತಮ್ಮ, ಹೊನ್ನಲಕ್ಷ್ಮೀ, ಜಿಪಂ ಎಇಇ ಆನಂದ್, ಮಿಷನ್ ಶಕ್ತಿ ಉಪನಿರ್ದೇಶಕರ ಕಚೇರಿಯ ಜೆಂಡರ್ ಸ್ಪೆಷಲಿಸ್ಟ್ ಆಯಿಷಾ ಇತರರು ಇದ್ದರು.